ಹಾಸನ: ಭತ್ತ ನಾಟಿ ಮಾಡ್ತಿದ್ದ ವೇಳೆ ಸಿಡಿಲು ಬಡಿದು 15 ಜನರಿಗೆ ಗಾಯವಾಗಿದ್ದು, ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕೋರಲಗದ್ದೆ ಗ್ರಾಮದಲ್ಲಿ ಭತ್ತ ನಾಟಿ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು 15 ಜನರು ಅಸ್ವಸ್ಥರಾಗಿದ್ದಾರೆ. ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಎಲ್ಲರನ್ನು ಸಮೀಪದ ಸಕಲೇಶಪುರ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೆ.ಬಿ. ಚಂದ್ರು ಎಂಬುವರಿಗೆ ಸೇರಿದ ಗದ್ದೆಯಲ್ಲಿ 25 ಮಂದಿ ನಾಟಿ ಮಾಡುತ್ತಿದ್ದರು. ಈ ವೇಳೆ ಗುಡುಗು, ಸಿಡಿಲು ಸಹಿತ ದಿಢೀರ್ ಮಳೆ ಶುರುವಾಗಿ, ಸಿಡಿಲು ಬಡಿದು ಹಲವು ಕಾರ್ಮಿಕರು ಗಾಯಗೊಂಡಿದ್ದಾರೆ. ಸಿಡಿಲು ಬಡಿದ ಕೂಡಲೇ ಹದಿನೈದು ಮಂದಿ ಸ್ಥಳದಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದರು. ಘಟನೆ ಬಳಿಕ ಸ್ಥಳೀಯರು ತಕ್ಷಣ ತುರ್ತು ವಾಹನದ ಮೂಲಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರೇಣುಕಾ (49), ಸವಿತಾ (45), ಸುಮಿತ್ರ (51), ರೇಣುಕಮ್ಮ (55), ನೇತ್ರಾ (40), ನಿರ್ಮಲಾ (51), ವೀಣಾ (35), ಅನಿತಾ (55), ಮಂಜುಳಾ (45), ಪುಷ್ಪಾ (35), ಭಾಗ್ಯಾ (45), ಶಾರದಮ್ಮ (55), ಜಯಂತಿ (55) ಗಾಯಿತ್ರಮ್ಮ (45) ವನಜಾಕ್ಷಿ (45) ಎಂಬ 15 ಮಂದಿಗೆ ಗಾಯವಾಗಿದ್ದು, ಲತಾ (35) ಎಂಬುವರ ಸ್ಥಿತಿ ಗಂಭೀರವಾಗಿದೆ. ಬೇಲೂರು ತಾಲ್ಲೂಕು ಅರೇಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಮುಳ್ಳಯ್ಯನಗಿರಿ ಸೇರಿದಂತೆ 77 ಪ್ರದೇಶಗಳಲ್ಲಿ ಜಿಯೋಲಾಜಿಕಲ್ ಸರ್ವೇ ತಂಡ ಪರಿಶೀಲನೆ: ಏಕೆ ಗೊತ್ತೆ? - geological survey