ಬೆಂಗಳೂರು: ವರ್ಷಕ್ಕೆ ಮೂರು ಪರೀಕ್ಷಾ ಪದ್ಧತಿ ಅಳವಡಿಕೆಯ ಬೆನ್ನಲ್ಲೇ ದ್ವಿತೀಯ ಪಿಯುಸಿ ಪರೀಕ್ಷಾ ಸಮಯದಲ್ಲಿ 15 ನಿಮಿಷ ಕಡಿತಗೊಳಿಸಿ ಮತ್ತೊಂದು ಪ್ರಯೋಗಕ್ಕೆ ಕೈಹಾಕಿದೆ. ಹೊಸ ಪದ್ಧತಿ 2024-25ನೇ ಶೈಕ್ಷಣಿಕ ಸಾಲಿನ ಪರೀಕ್ಷೆಯಿಂದಲೇ ಜಾರಿ ಆಗಲಿದೆ. ಸಮಯ ಕಡಿತ ಮಾಡಿರುವ ಸಂಬಂಧ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನಿಗದಿಯಾಗಿದ್ದ ಸಮಯ ಈ ವರ್ಷದಿಂದ ಕಡಿತವಾಗಿದೆ. ಈ ಮೊದಲು ವಿದ್ಯಾರ್ಥಿಗಳಿಗೆ ಉತ್ತರ ಬರೆಯಲು 3 ಗಂಟೆ 15 ನಿಮಿಷ ಸಮಯ ಕೊಡಲಾಗುತ್ತಿತ್ತು. 3 ಗಂಟೆ ಉತ್ತರ ಬರೆಯಲು ಮತ್ತು 15 ನಿಮಿಷಗಳು ಪ್ರಶ್ನೆ ಪತ್ರಿಕೆ ಓದಲು ಸಮಯ ನೀಡಲಾಗುತ್ತಿತ್ತು. ಆದರೆ ಹೊಸ ನಿಯಮದ ಪ್ರಕಾರ ಉತ್ತರ ಬರೆಯಲು 2 ಗಂಟೆ 45 ನಿಮಿಷ ಸಮಯ ಮತ್ತು 15 ನಿಮಿಷ ಪ್ರಶ್ನೆ ಪತ್ರಿಕೆ ಓದಲು ಅವಕಾಶ ನೀಡಲಾಗಿದೆ. 15 ನಿಮಿಷ ಸಮಯವನ್ನು ಕಡಿತ ಮಾಡಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ.
ಸಮಯ ಕಡಿತಕ್ಕೆ ಬೋರ್ಡ್ ಕಾರಣ ನೀಡಿದೆ. ಮೊದಲು 3 ಗಂಟೆ 15 ನಿಮಿಷ ಇದ್ದ ಸಮಯದಲ್ಲಿ 100 ಅಂಕಗಳಿಗೆ ಪ್ರಶ್ನೆ ಪತ್ರಿಕೆ ಕೊಡಲಾಗುತ್ತಿತ್ತು. ಆದರೆ ಈಗ 70/80 ಅಂಕಗಳಿಗೆ ಲಿಖಿತ ಪರೀಕ್ಷೆ ಇದ್ದು, ಉಳಿದ ಅಂಕಗಳು ಇಂಟರ್ನಲ್ ಅಸೆಸ್ಮೆಂಟ್ಗೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 15 ನಿಮಿಷ ಉತ್ತರ ಬರೆಯಲು ಕಡಿತ ಮಾಡಲಾಗಿದೆ ಎನ್ನುವುದು ಇಲಾಖೆಯ ಸ್ಪಷ್ಟೀಕರಣವಾಗಿದೆ.
2023-24ನೇ ಸಾಲಿನಿಂದ ಪ್ರಾಯೋಗಿಕ ಪರೀಕ್ಷೆ ಹಾಗೂ ಆಂತರಿಕ ಮೌಲ್ಯಮಾಪನಕ್ಕೆ ಪ್ರತ್ಯೇಕ ಅಂಕ ನಿಗದಿ ಮಾಡಲಾಗಿದೆ. ಆದ್ದರಿಂದ ಲಿಖಿತ ಪರೀಕ್ಷೆಯ ಅಂಕಗಳನ್ನು ಕಡಿತ ಮಾಡಲಾಗಿತ್ತು. ಆದರೆ, ಪರೀಕ್ಷಾ ಅವಧಿ ಕಡಿತಗೊಳಿಸಿರಲಿಲ್ಲ. ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಗೃಹ ವಿಜ್ಞಾನ, ಭೌತಶಾಸ್ತ್ರ, ರಸಾಯನ ಶಾಸ್ತ್ರ ಸೇರಿದಂತೆ ಪ್ರಾಯೋಗಿಕ ಪರೀಕ್ಷೆಯ ವಿಷಯಗಳಲ್ಲಿ ಲಿಖಿತ ಪರೀಕ್ಷೆಯನ್ನು 70 ಅಂಕ ಹಾಗೂ ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಲ್ಲಿ 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವಾಗ ಪಠ್ಯ ಹೊರತಾದ ಪ್ರಶ್ನೆಗಳಿಗೆ ಅವಕಾಶ ನೀಡಬಾರದು. ಪಠ್ಯಕ್ರಮದಲ್ಲಿ ಇರುವ ವಿಯಷಗಳ ಮೇಲಷ್ಟೇ ಪ್ರಶ್ನೆಗಳನ್ನು ಸಿದ್ಧಪಡಿಸುವುದು ಕಡ್ಡಾಯ ಎಂದು ಹೇಳಿದೆ.
ವಿದ್ಯಾರ್ಥಿಗಳು 80 ಅಂಕಗಳಿಗೆ ಉತ್ತರಿಸಬೇಕಾದ ವಿಷಯಗಳ ಪ್ರಶ್ನೆಪತ್ರಿಕೆಗಳು ಒಟ್ಟು 120 ಅಂಕಗಳ ಪ್ರಶ್ನೆಗಳನ್ನು ಹೊಂದಿರಲಿದ್ದು, ಅವಧಿಗಳಲ್ಲಿ 80 ಅಂಕಗಳಿಗಷ್ಟೇ ಉತ್ತರಿಸಬೇಕು. 70 ಅಂಕಗಳಿಗೆ ಉತ್ತರಿಸಬೇಕಾದ ವಿಷಯಗಳ ಪ್ರಶ್ನೆಪತ್ರಿಕೆಗಳು 105 ಅಂಕಗಳ ಪ್ರಶ್ನೆಗಳನ್ನು ಹೊಂದಿರಲಿದ್ದು, ಅವಧಿಗಳಲ್ಲಿ 70 ಅಂಕಗಳಿಗಷ್ಟೇ ಉತ್ತರಿಸಬೇಕು ಎಂದು ಮಂಡಳಿ ಸುತ್ತೋಲೆಯಲ್ಲಿ ತಿಳಿಸಿದೆ.
ಕಳೆದ ವರ್ಷ ದ್ವಿತೀಯ ಪಿಯು ಮತ್ತು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಠ್ಯಕ್ರಮ ಹೊರತಾದ ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳು ಹಾಗೂ ಪೋಷಕರ ಕೆಂಗಣ್ಣಿಗೆ ಸರಕಾರ ಗುರಿಯಾಗಿತ್ತು. ಆದರೆ ಈ ಬಾರಿ ಪಠ್ಯಕ್ರಮ ಹೊರತಾಗಿ ಯಾವುದೇ ಪ್ರಶ್ನೆಗಳನ್ನು ರೂಪಿಸದಂತೆ ಪ್ರಶ್ನೆ ಪತ್ರಿಕೆ ರೂಪಿಸುವವರಿಗೆ ಈಗಲೇ ಮಂಡಳಿ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಸೆಪ್ಟೆಂಬರ್ 28ರಂದು 402 ಪಿಎಸ್ಐ ಪರೀಕ್ಷೆ ಇಲ್ಲ: ಮತ್ತೆ ಮುಂದೂಡಿಕೆ - PSI Exam Postponed