ಚಾಮರಾಜನಗರ: ರಸ್ತೆ ಅಪಘಾತಗಳು ಚಾಮರಾಜನಗರದಲ್ಲಿ ಹೆಚ್ಚಾಗುತ್ತಿವೆ. ಇದರಲ್ಲಿ ಹೆಲ್ಮೆಟ್ ಹಾಕದ ಬೈಕ್ ಸವಾರರೇ ಅಧಿಕ ಸಂಖ್ಯೆಯಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಪೊಲೀಸರ ಅಂಕಿಅಂಶಗಳು ಸಾಬೀತು ಮಾಡಿವೆ.
ಜನವರಿಯಿಂದ ಜುಲೈತನಕ 134 ಮಂದಿ ಅಸುನೀಗಿದ್ದು, ಆಗಸ್ಟ್ ವೇಳೆಗೆ ಈ ಸಂಖ್ಯೆ 140 ದಾಟಿದೆ. ಜುಲೈ ತಿಂಗಳಲ್ಲಿ 22 ಮಂದಿ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ 15 ಮಂದಿ ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿರಲಿಲ್ಲ.
ರಾಷ್ಟ್ರೀಯ ಹೆದ್ದಾರಿ ಮತ್ತು ಬೈಪಾಸ್ ರಸ್ತೆ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿರುವುದರಿಂದ ಅತಿವೇಗದ ಬೈಕ್ ಚಾಲನೆ ಹೆಚ್ಚಾಗುತ್ತಿದೆ. ಜೊತೆಗೆ, ಸವಾರರು ಹೆಲ್ಮೆಟ್ ಧರಿಸದೇ ಸವಾರಿ ಮಾಡುತ್ತಿದ್ದಾರೆ. ಇಂಥ ನಿರ್ಲಕ್ಷ್ಯದಿಂದಾಗಿ ಅಪಘಾತದಲ್ಲಿ ಸಾವುನೋವು ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಪ್ರತಿಕ್ರಿಯಿಸಿದ್ದು, "ಅತಿವೇಗದ ಚಾಲನೆ ಮತ್ತು ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡುವ ಮೂಲಕ ಜನರು ಅಪಘಾತದಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಈಗಾಗಲೇ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲೂ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ದಂಡ ಕಟ್ಟಿಸುವ ಬದಲು ಹೆಲ್ಮೆಟ್ ಖರೀದಿಸಿ ಬಂದು ಬೈಕ್ ತೆಗೆದುಕೊಂಡು ಹೋಗುವಂತೆ ಅರಿವು ಮೂಡಿಸಲಾಗುತ್ತಿದೆ. ಹೆಲ್ಮೆಟ್ ಧರಿಸದೇ ಪ್ರಾಣ ಕಳೆದುಕೊಂಡವರು ಬಹಳಷ್ಟು ಮಂದಿ ಇದ್ದಾರೆ. ಒಂದು ವೇಳೆ ಅವರು ಹೆಲ್ಮೆಟ್ ಧರಿಸಿದ್ದರೆ ಪ್ರಾಣಾಪಾಯದಿಂದ ಪಾರಾಗುವ ಸಾಧ್ಯತೆ ಹೆಚ್ಚಿರುತ್ತಿತ್ತು" ಎಂದರು.
"ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗದ ಚಾಲನೆ ಕಂಡುಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಪೀಡ್ ಲೇಸರ್ ಗನ್ ಮೂಲಕ ದಂಡ ಹಾಕಲಾಗುತ್ತಿದೆ. ಬೈಕ್ ಸವಾರರು ಮತ್ತು ಹಿಂಬದಿ ಸವಾರರು ಕೂಡಾ ಹೆಲ್ಮೆಟ್ ಧರಿಸಬೇಕು" ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಹೆಲ್ಮೆಟ್ ಹಾಕದವರಿಗೆ ಅಪಘಾತದ ದೃಶ್ಯ ತೋರಿಸಿ ಎಸ್ಪಿ ಕ್ಲಾಸ್ - Wear Helmet