ಹಾಸನ: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಪ್ರಕರಣ ಸಂಬಂಧ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸೋಮವಾರ ಓಪನ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ಕಸ್ಟಡಿಗೆ ಪಡೆಯುವಂತೆ ಪೊಲೀಸರಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.
ಹಾಸನದ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾದ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ, ಬೆದರಿಕೆ ಪ್ರಕರಣ ಸಂಬಂಧ ವಕೀಲ ದೇವರಾಜೇಗೌಡ ಅವರನ್ನು ಪೊಲೀಸರು ಶುಕ್ರವಾರ ರಾತ್ರಿ ವಶಕ್ಕೆ ಪಡೆದಿದ್ದರು. ಚಿತ್ರದುರ್ಗದ ಹಿರಿಯೂರಿನಲ್ಲಿ ವಶಕ್ಕೆ ಪಡೆದು, ತಡರಾತ್ರಿ ಹೊಳೆನರಸೀಪುರ ಪೊಲೀಸರಿಗೆ ಹಸ್ತಾಂತರ ಮಾಡಲಾಗಿತ್ತು. ಶನಿವಾರ ವೈದ್ಯಕೀಯ ಪರೀಕ್ಷೆ ಬಳಿಕ ಪೊಲೀಸರು ದೇವರಾಜೇಗೌಡರನ್ನು ಪ್ರಿನ್ಸಿಪಲ್ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಿದರು.
14 ದಿನಗಳ ನ್ಯಾಯಾಂಗ ಬಂಧನ ಹಿನ್ನೆಲೆಯಲ್ಲಿ ದೇವರಾಜೇಗೌಡ ಅವರನ್ನು ಹಾಸನ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ. ಹೊಳೆನರಸೀಪುರ ನಗರ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅಜಯ್‌ಕುಮಾರ್ ನೇತೃತ್ವದ ತಂಡವು ಅವರನ್ನು ಜೈಲಿಗೆ ರವಾನಿಸಿದೆ.
ಕಾರಾಗೃಹಕ್ಕೆ ಹೋಗುವ ಮುನ್ನ ಮಾತನಾಡಿದ ದೇವರಾಜೇಗೌಡ, ''ಇನ್ನೂ ಎಂಟು ದಿನದಲ್ಲಿ ಹೊರ ಬರುತ್ತೇನೆ, ತಲೆಕೆಡಿಸಿಕೊಳ್ಳಬೇಡಿ. ಸತ್ಯಕ್ಕೆ ಜಯವಿದೆ'' ಎನ್ನುತ್ತ ತೆರಳಿದರು.
ಇದನ್ನೂ ಓದಿ: ಚಿತ್ರದುರ್ಗ: ವಕೀಲ ದೇವರಾಜೇಗೌಡ ವಶಕ್ಕೆ - DEVARAJEGOWDA IN POLICE CUSTODY