ರಾಯಚೂರು: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಫೆ.29ರಂದು ನಡೆಯಲಿದೆ ಎಂದು ಕುಲಪತಿ ಡಾ. ಎಂ. ಹನುಮಂತಪ್ಪ ತಿಳಿಸಿದರು.
ಕೃಷಿ ವಿವಿಯ ಇಂಟರ್ನ್ಯಾಷನಲ್ ಗೆಸ್ಟ್ಹೌಸ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೃಷಿ ವಿವಿಯ ಪ್ರೇಕ್ಷಾಗಾರ ಸಭಾಂಗಣದಲ್ಲಿ ಫೆ.29 ರಂದು ಬೆಳಗ್ಗೆ 11ಕ್ಕೆ 13ನೇ ಘಟಿಕೋತ್ಸವ ಜರುಗಲಿದೆ. ಇದರಲ್ಲಿ 363 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 127 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 26 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದರಲ್ಲಿ ವಿದ್ಯಾರ್ಥಿನಿಯರಿಗೆ 144 ಸ್ನಾತಕ, 67 ಸ್ನಾತಕೋತ್ತರ ಹಾಗೂ 12 ಡಾಕ್ಟರೇಟ್ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಸ್ನಾತಕ ಪದವಿಯಲ್ಲಿ 23 ಚಿನ್ನದ ಪದಕ ಮತ್ತು ಇಬ್ಬರು ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಗುತ್ತದೆ. ಸ್ನಾತಕೋತ್ತರ ಪದವಿಯಲ್ಲಿ 16 ಚಿನ್ನದ ಪದಕ ಹಾಗೂ ಡಾಕ್ಷರೇಟ್ ಪದವಿ ವಿದ್ಯಾರ್ಥಿಗಳಿಗೆ 13 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು ಅವರು ತಿಳಿಸಿದರು.
ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಪಾಲ ಡಾ. ಥಾವರ್ ಚಂದ್ ಗೆಹ್ಲೋಟ್ ವಹಿಸಲಿದ್ದಾರೆ. ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ ಕೂಡ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಕೃಷಿ ತಾಂತ್ರಿಕತೆ ವಿಭಾಗದ ಉಪ ಮಹಾನಿರ್ದೇಶಕ ಡಾ. ಎಸ್.ಎನ್. ಝಾ ಘಟಿಕೋತ್ಸವ ಭಾಷಣಕಾರಾಗಿ ಭಾಗವಹಿಸಲಿದ್ದಾರೆ ಎಂದು ಕುಲಪತಿಗಳು ವಿವರಿಸಿದರು.
ಮುಂದುವರೆದು ಮಾತನಾಡಿದ ಅವರು, ಈ ಬಾರಿ ರಾಜ್ಯ ಸರ್ಕಾರಕ್ಕೆ 25 ಕೋಟಿ ರೂಪಾಯಿ ಅನುದಾನಕ್ಕಾಗಿ ಪ್ರಸ್ತಾವನೆಯನ್ನ ಸಲ್ಲಿಸಲಾಗಿತ್ತು. ಸರ್ಕಾರ ಬಜೆಟ್ನಲ್ಲಿ 5 ಕೋಟಿ ರೂಪಾಯಿ ನೀಡಿದೆ. ಅಲ್ಲದೇ ವಿವಿಧ ಯೋಜನೆಗಳ ಮುಖಾಂತರ ಅನುದಾನ ದೊರಯಲಿದೆ. ಕೃಷಿ ವಿವಿಯಿಂದ ಅವಿಷ್ಕಾರಿಸಿದ ಇ-ಸ್ಯಾಪ್ ತಂತ್ರಜ್ಞಾನದಿಂದ ರೈತರ ಬೆಳೆಗಳಿಗೆ ಬರುವ ಕೀಟ, ರೋಗ ಮತ್ತು ಪೋಷಕಾಂಶಗಳ ಕೊರತೆಗೆ ಸಕಾಲದಲ್ಲಿ ಸಂರಕ್ಷಣೆ ಒದಗಿಸುವ ನವೀನ ರೀತಿಯ ಅವಿಷ್ಕಾರವಾಗಿದೆ. ರೈತರಿಗೆ, ತಜ್ಞರಿಗೆ ಹಾಗೂ ಕೃಷಿ ಅಧಿಕಾರಿಗಳಿಗೆ ಬೆಳೆ ಸಂರಕ್ಷಣೆ ಕುರಿತಾದ ಮಾಹಿತಿಯನ್ನು ಇ-ಸ್ಯಾಪ್ ಮೂಲಕ ವಿಶ್ವವಿದ್ಯಾಲಯವು ಒದಗಿಸುತ್ತಿದೆ. ಈ ಯೋಜನೆಯನ್ನು ರಾಜ್ಯ ಸರ್ಕಾರ ತನ್ನ ಬಜೆಟ್ನಲ್ಲಿ ಪ್ರಸ್ತಾಪಿಸಿ ವಿಶ್ವವಿದ್ಯಾಲಯದ ಘನತೆಯನ್ನು ಹೆಚ್ಚಿಸಿದೆ ಎಂದರು. ಈ ವೇಳೆ ಕುಲಸಚಿವ ಡಾ.ಎಂ.ವೀರನಗೌಡ, ಬಿ.ಕೆ.ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಭೀಕರ ಬರದ ಹಿನ್ನೆಲೆ ಈ ವರ್ಷ ರಾಯಚೂರು ವಿವಿ ಕೃಷಿ ಮೇಳ ರದ್ದು: ಕುಲಪತಿ ಡಾ ಎಂ ಹನುಮಂತಪ್ಪ