ಮೈಸೂರು: "ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಕೆಯಾಗಿ ಬಾಕಿ ಉಳಿದಿದ್ದ ಸುಮಾರು 6 ಸಾವಿರ ಪ್ರಕರಣಗಳಲ್ಲಿ 1,230 ಪ್ರಕರಣಗಳನ್ನು ಒಂದು ತಿಂಗಳ ಅವಧಿಯಲ್ಲಿ ಇತ್ಯರ್ಥ ಮಾಡಲಾಗಿದೆ" ಎಂದು ಆಯೋಗದ ಅಧ್ಯಕ್ಷ ಎಲ್.ನಾರಾಯಣಸ್ವಾಮಿ ತಿಳಿಸಿದ್ದಾರೆ.
ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕೆಲವು ಪ್ರಕರಣಗಳನ್ನು ದೂರು ಬಂದ ತಕ್ಷಣ ಅಲ್ಲಿಯೇ ಪರಿಹರಿಸಲಾಗುತ್ತಿದೆ. ವಿಳಂಬ ಮಾಡುವ ಪ್ರಶ್ನೆಯೇ ಇಲ್ಲ. ಮೈಸೂರು ಜಿಲ್ಲೆಯಲ್ಲಿ 300 ಪ್ರಕರಣಗಳಿದ್ದವು. ಇವುಗಳಲ್ಲಿ 200 ದೂರುಗಳನ್ನು ಇತ್ಯರ್ಥ ಮಾಡಲಾಗಿದೆ. 100 ಪ್ರಕರಣಗಳನ್ನು ಮೈಸೂರಿನಲ್ಲಿಯೇ ವಿಲೇವಾರಿ ಮಾಡಲಾಗುವುದು" ಎಂದು ವಿವರ ನೀಡಿದರು.
36 ಗಂಭೀರ ಪ್ರಕರಣಗಳು ಇತ್ಯರ್ಥ: "ಎನ್‌ಕೌಂಟರ್, ಲಾಕಪ್ ಡೆತ್‌ನಂತಹ ಗಂಭೀರವಾದ 36 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಎನ್‌ಕೌಂಟರ್ ಮಾಡಿದ ಪೊಲೀಸ್ ವಿರುದ್ಧ 302 ಕೇಸ್ ದಾಖಲಿಸಲಾಗಿದೆ. ಲಾಕಪ್ ಡೆತ್‌ಗೆ ಸಂಬಂಧಪಟ್ಟ ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ" ಎಂದು ಹೇಳಿದರು.
24*7 ದೂರು ಸ್ವೀಕಾರ: "ಮಾನವ ಹಕ್ಕುಗಳ ಉಲ್ಲಂಘನೆ ಸಂಬಂಧಪಟ್ಟಂತೆ 24 ಗಂಟೆಯೂ ದೂರು ನೀಡಬಹುದು. ದೂರು ಸಲ್ಲಿಕೆಗೆ ಆ್ಯಪ್ ಇದೆ. ದೃಶ್ಯ ಮಾಧ್ಯಮ, ಪತ್ರಿಕೆಗಳಲ್ಲಿ ಬಂದ ವರದಿ ಆಧಾರದ ಮೇಲೆ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತಿದ್ದೇವೆ" ಎಂದರು.
"ತುಳಿತಕ್ಕೆ ಒಳಪಟ್ಟ ವ್ಯಕ್ತಿಗೆ ತನ್ನ ಹಕ್ಕು ಉಲ್ಲಂಘನೆ ಆಗಿರುವ ಬಗ್ಗೆ ಅರಿವೇ ಇಲ್ಲ. ಶಾಲಾ ಮಕ್ಕಳಿಗೆ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಚಿಂತನೆ ಮಾಡಿದ್ದೇವೆ. ಈ ಸಂಬಂಧ ಮೂರು ಸ್ವಯಂ ಸೇವಾ ಸಂಸ್ಥೆಗಳು ತಮ್ಮನ್ನು ಸಂಪರ್ಕಿಸಿವೆ" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸರ್ಕಾರದೊಂದಿಗೆ ಸಂಬಂಧ ಇಲ್ಲ: "ಆಯೋಗ ಮತ್ತು ಸರ್ಕಾರದ ನಡುವೆ ಸಂಬಂಧ ಇಲ್ಲ. ನಮಗೇ ಇರುವ ಪರಿಮಿತಿಯಲ್ಲಿ ಕೆಲಸ ಮಾಡಬೇಕು. ಅವಕಾಶ ಸಿಕ್ಕಾಗ ಏನು ಕೆಲಸ ಮಾಡಿದ್ದೇವೆ ಎಂಬುದು ಮುಖ್ಯ. ಅಧಿಕಾರ ವಹಿಸಿಕೊಂಡ ಒಂದೂವರೆ ತಿಂಗಳಲ್ಲಿ ತೃಪ್ತಿಯಾಗುವ ಕೆಲಸ ಮಾಡಿದ್ದೇವೆ" ಎಂದು ತಿಳಿಸಿದರು.
ಜಿಲ್ಲಾ ಕೇಂದ್ರದಲ್ಲಿ ಇತ್ಯರ್ಥ: ಬೆಂಗಳೂರು ಕೇಂದ್ರ ಸ್ಥಾನದಲ್ಲಿ ಕುಳಿತು ದೂರುಗಳಿಗೆ ಸಂಬಂಧಪಟ್ಟಂತೆ ಮಾಹಿತಿ ಪಡೆಯೋದು, ಅಕಾರಿಗಳ ನಡುವೆ ಸಮನ್ವಯ ಸಾಧಿಸುವುದು ತಡವಾಗುತ್ತಿತ್ತು. ಹಾಗಾಗಿ ಜಿಲ್ಲಾ ಕೇಂದ್ರಗಳಲ್ಲಿ ದೂರು ವಿಲೇವಾರಿ ಮಾಡುತ್ತಿದ್ದೇವೆ. ಉತ್ತರ ಕರ್ನಾಟಕದ ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಗಳ ನಂತರ ಮೈಸೂರು ಭಾಗದ ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ದೂರು ವಿಲೇವಾರಿ ಮಾಡುತ್ತೇವೆ ಎಂದು ವಿವರಿಸಿದರು.
41 ಆದಿವಾಸಿಗಳಿಗೆ ನಿವೇಶನ: "ಮೂಲಭೂತ ಸೌಕರ್ಯ ಕಲ್ಪಿಸದಿರುವ ಬಗ್ಗೆ ವಿರಾಜಪೇಟೆ ತಾಲೂಕಿನ ಬಡುಕಟ್ಟು ವ್ಯಕ್ತಿಯೊಬ್ಬರಿಂದ ದೂರು ಬಂದಿತ್ತು. ಕೊಡಗು ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿದ ಅರ್ಧಗಂಟೆಯಲ್ಲಿ ನಿವೇಶನ ಕೊಡುವುದಾಗಿ ಒಪ್ಪಿಕೊಂಡರು. ತಹಶೀಲ್ದಾರ್ ವಾಟ್ಸ್ಆ್ಯಪ್ ಮೂಲಕ 41 ಬುಡಕಟ್ಟು ಕುಟುಂಬಗಳಿಗೆ ನಿವೇಶನ ಹಂಚಿಕೆಯ ಪತ್ರ ಕಳುಹಿಸಿದರು. ಜ. 31ರಂದು ವಿರಾಜಪೇಟೆ ತಾಲೂಕಿನ ಹಾಡಿ ಗ್ರಾಮಗಳಿಗೆ ಭೇಟಿ ನೀಡಿ ದೂರು ಆಲಿಸಲಾಗುವುದು" ಎಂದು ಹೇಳಿದರು.
ನಿವೃತ್ತ ಸೈನಿಕನಿಗೆ ಜಮೀನು: ಯಾದಗಿರಿ ಜಿಲ್ಲೆಯ ಸೈನಿಕರೊಬ್ಬರು 2001ರಲ್ಲಿ ನಿವೃತ್ತರಾದರು. 2004ರಲ್ಲಿ ಅವರು ತಮಗೆ 3 ಎಕರೆ ಜಮೀನು ಕೊಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಆಯೋಗಕ್ಕೆ ದೂರು ಬಂದ ಬಳಿಕ 2024ರ ಜ. 19ರಂದು ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ. ಅಧಿಕಾರಿಗಳು ಉತ್ತಮ ಜಮೀನು ಕೊಡುವ ಪ್ರಯತ್ನದಲ್ಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಯೋಗದ ಸದಸ್ಯರಾದ ಶ್ಯಾಮ್ ಭಟ್ ಹಾಗೂ ಎಸ್.ಕೆ.ವೆಂಟಗೋಡಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ: ನಿವೃತ್ತ ನ್ಯಾಯಮೂರ್ತಿ ನೇಮಕ ಪ್ರಶ್ನಿಸಿದ್ದ ಅರ್ಜಿ ಇತ್ಯರ್ಥ