ಬೆಂಗಳೂರು: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರತ್ಯೇಕ ಎರಡು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಟ್ಟು12 ಮಂದಿ ಆರೋಪಿಗಳನ್ನ ಬಂಧಿಸಿದ್ದಾರೆ.
ವೇಗವಾಗಿ ಬೈಕ್ ಚಾಲನೆ ವಿಚಾರವಾಗಿ ಎರಡು ಗುಂಪುಗಳ ನಡುವೆ ಉಂಟಾಗಿದ್ದ ಗಲಾಟೆ ಬಳಿಕ ಮಾರಾಮಾರಿ ತಿರುಗಿತ್ತು. ಈ ಘಟನೆ ಸಂಬಂಧ ಏಪ್ರಿಲ್ 28 ರಂದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿತ್ತು. ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು, ಬಾಬು, ಪ್ರವೀಣ್, ಅರುಣ್, ಅಜಿತ್ ಭರತ್ ಹಾಗೂ ಮತ್ತೊಂದು ಗುಂಪಿನ ವಾಸಿಂ, ವಾಹೀದ್, ಇಲಿಯಾಸ್, ನಹೀಂ, ಅಬಾರ್ಜ್ ಹಾಗೂ ಅಬ್ರಾರ್ ಎಂಬುವರನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಿದ್ದೇನು ?: ಸಿದ್ದಾಪುರದ ಗುಟ್ಟೇಪಾಳ್ಯದಲ್ಲಿ ಪ್ರಕರಣದಲ್ಲಿ ದೂರುದಾರರಾಗಿರುವ ಭರತ್ ರಾಜ್ ಸಂಬಂಧಿಕರೊಬ್ಬರು ಸಾವನ್ನಪ್ಪಿದ್ದರು. ಮನೆ ಮುಂದೆ ಶಾಮಿಯಾನ ಹಾಕಿ ಶವವನ್ನು ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿತ್ತು. ಕಿರಿದಾದ ರಸ್ತೆಯಲ್ಲಿ ಆರೋಪಿಗಳಾದ ವಾಹೀದ್ ಹಾಗೂ ಆತನ ಸ್ನೇಹಿತ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದಿದ್ದಾರೆ. ಹಲವು ಬಾರಿ ವೇಗವಾಗಿ ಓಡಿಸಿದ್ದರಿಂದ ಭರತ್ ಹಾಗೂ ಸಂಬಂಧಿಕ ಅರುಣ್ ಸೇರಿದಂತೆ ಇನ್ನಿತರರು ಪ್ರಶ್ನಿಸಿದ್ದಾರೆ. ಅಲ್ಲದೇ ವಾಹಿದ್ ತಂದೆಗೂ ಮಗನ ಪುಂಡಾಟಿಕೆ ಬಗ್ಗೆ ಹೇಳಿದ್ದರು. ಕೋಪಗೊಂಡ ಆತನ ತಂದೆ ವಾಹೀದ್ಗೆ ಬೈದು ಬೈಕ್ ಕೀ ಕಸಿದುಕೊಂಡಿದ್ದರು. ಇದಕ್ಕೂ ಮುನ್ನ ಸಲ್ಮಾನ್ ಎಂಬಾತನ ಮೇಲೆ ಅಜಿತ್ ಸೇರಿದಂತೆ ಇನ್ನಿತರರು ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ಮಾಡಿದ್ದರು. ಇದನ್ನ ಪ್ರಶ್ನಿಸಲು ವಾಹೀದ್ ಸಾವಿನ ಮನೆ ಕಡೆ ಬೈಕ್ ಸ್ಪೀಡಾಗಿ ಓಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತಂದೆ ಬೈದಿದಕ್ಕೆ ಅಜಿತ್ ಮೇಲೆ ಕಿಡಿಕಾರಿದ್ದ ವಾಹೀದ್: ಬೈಕ್ ವೇಗವಾಗಿ ಓಡಿಸುವ ವಿಚಾರವಾಗಿ ತಂದೆ ಬಳಿ ಅಜಿತ್ ಹೇಳುವುದಲ್ಲದೇ ಸ್ನೇಹಿತ ಸಲ್ಮಾನ್ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಕಿಡಿಕಾರಿದ್ದ. ಅಜಿತ್ಗೆ ಬುದ್ಧಿ ಕಲಿಸಲು ನಿರ್ಧರಿಸಿದ ವಾಹೀದ್, ಸಹಚರರನ್ನ ಒಗ್ಗೂಡಿಸಿಕೊಂಡು ಸಂಚು ಮಾಡಿ ಏಪ್ರಿಲ್ 28ರಂದು ರಾತ್ರಿ 10.30ಕ್ಕೆ ಗುಟ್ಟೆಪಾಳ್ಯ ಬಳಿ ನಡೆದುಕೊಂಡು ಹೋಗುತ್ತಿದ್ದ ಭರತ್ ರಾಜ್ ಇನ್ನಿತರರ ಮೇಲೆ ಸುಮಾರು 10 ಮಂದಿ ಗುಂಪು ಚಾಕು-ದೊಣ್ಣೆಗಳಿಂದ ಏಕಾಏಕಿ ಹಲ್ಲೆ ಮಾಡಿದ್ದರು. ಸದ್ಯ ಪ್ರತ್ಯೇಕ ಎರಡು ಪ್ರಕರಣ ದಾಖಲಿಸಿಕೊಂಡು ಎರಡು ಗುಂಪಿನ 12 ಮಂದಿ ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಿಸಿಪಿ ಲೊಕೇಶ್ ಭರಮಪ್ಪ ತಿಳಿಸಿದ್ದಾರೆ.