ಬೆಂಗಳೂರು: ಪಾಲಿಕೆಯ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿರುವ ರಾಕ್‌ಲೈನ್ ಮಾಲ್ ಬಾಕಿ ತೆರಿಗೆ ಪಾವತಿಸದ ಕಾರಣ ಬುಧವಾರ ಪಾಲಿಕೆ ಕಂದಾಯ ಅಧಿಕಾರಿಗಳು ಮಾಲ್ ಸೀಜ್ ಮಾಡಿದ್ದಾರೆ. ರಾಕ್ ಲೈನ್ ಮಾಲ್ 2011 ರಿಂದ 2022-23 ರವರೆಗೆ ಬಾಕಿ ಉಳಿಸಿಕೊಂಡಿರುವ 11.51 ಕೋಟಿ ರೂ. ಆಸ್ತಿ ತೆರಿಗೆಯನ್ನು ಪಾಲಿಕೆಗೆ ಪಾವತಿಸಬೇಕಿದೆ. ಬಾಕಿ ತೆರಿಗೆ ಪಾವತಿಸಲು ಈಗಾಗಲೇ ಡಿಮಾಂಡ್ ನೋಟಿಸ್ ನೀಡಿದ್ದರೂ ತೆರಿಗೆ ಪಾವತಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ವಲಯ ಆಯುಕ್ತೆ ಪ್ರೀತಿ ಗೆಹ್ಲೋಟ್, ವಲಯ ಜಂಟಿ ಆಯುಕ್ತ ಬಾಲಶೇಖರ್, ದಾಸರಹಳ್ಳಿ ವಲಯದ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಮಾರ್ಷಲ್ಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
ಎನ್.ಆರ್. ರಮೇಶ್ ಪ್ರತಿಕ್ರಿಯೆ: ''ಮಾಲ್‌ನ ಮಾಲೀಕರಾದ ರಾಕ್‌ಲೈನ್ ವೆಂಕಟೇಶ್ ಅವರು ಪಾಲಿಕೆಗೆ 8.50 ಕೋಟಿ ರೂ.ಗಳಷ್ಟು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಬಗ್ಗೆ ಹಾಗೂ ತಮ್ಮ ಸ್ವತ್ತಿನ ಪಿಐಡಿ ಸಂಖ್ಯೆಯನ್ನೇ ಬದಲಿಸಿಕೊಂಡಿದ್ದರು. ಈ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಬಿಎಂಟಿಎಫ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿತ್ತು. ಈ ಬಗ್ಗೆ ಬಿಬಿಎಂಪಿ ಆಯುಕ್ತರಿಗೆ ಮತ್ತು ಆಡಳಿತಾಧಿಕಾರಿಗಳಿಗೆ ದೂರುಗಳನ್ನು ಸಹ ನೀಡಲಾಗಿತ್ತು. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ನೀಡಿದ್ದ ನೋಟಿಸ್ಗೆ ಉತ್ತರಿಸದೆಯೇ ವೆಂಕಟೇಶ್ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಈಗ ನ್ಯಾಯಾಲಯದ ತಡೆಯಾಜ್ಞೆ ತೆರವುಗೊಂಡಿರುವ ಹಿನ್ನೆಲೆಯಲ್ಲಿ ಬೀಗ ಹಾಕಿದ್ದಾರೆ'' ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ: ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ನಿವಾಸದ ಮೇಲೆ ಇಡಿ ದಾಳಿ, ₹31 ಲಕ್ಷ ವಶಕ್ಕೆ