ಬೆಂಗಳೂರು: ಪ್ರಜಾಪ್ರಭುತ್ವದ ಹಬ್ಬವಾದ ಸಂಸತ್ತಿನ ಚುನಾವಣೆಗೆ ಸಕಲ ಸಿದ್ಧತೆ ಮಾಡಲಾಗಿದೆ. ರಾಜ್ಯದಲ್ಲಿ ಮೊದಲ ಹಂತದ ಲೋಕಸಭೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 14ರ ಪೈಕಿ 10 ಕ್ಷೇತ್ರಗಳಲ್ಲಿ ಹಾಲಿ ಲೋಕಸಭೆ ಸದಸ್ಯರು ಸ್ಪರ್ಧೆ ಮಾಡುತ್ತಿಲ್ಲ ಎಂಬುದು ವಿಶೇಷ.
ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಗೆದ್ದ 10 ಸಂಸದರು ಈ ಬಾರಿಯ ಕಣದಲ್ಲಿ ಇಲ್ಲ. ಇವರೆಲ್ಲರೂ ಬಿಜೆಪಿ ಪಕ್ಷದವರಾಗಿದ್ದಾರೆ. ಕೆಲವರು ಟಿಕೆಟ್ ಸಿಗದೆ ಸ್ಪರ್ಧೆಯಿಂದ ಹಿಂದುಳಿದರೆ, ಇನ್ನು ಕೆಲವರು ಕಾರಣಾಂತರಗಳಿಂದ ಕಣದಿಂದ ಹಿಂದೆ ಸರಿದಿದ್ದಾರೆ.
ಬಿಜೆಪಿಯ ಹಾಲಿ ಲೋಕಸಭೆ ಸದಸ್ಯ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಬಿ.ಎನ್.ಬಚ್ಚೇಗೌಡ, ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್, ಬಿಜೆಪಿ ಬೆಂಬಲಿತ ಪಕ್ಷೇತರ ಸಂಸದೆ, ನಟಿ ಸುಮಲತಾ ಅಂಬರೀಶ್, ಮುನಿಸ್ವಾಮಿ, ಜಿ.ಎಸ್.ಬಸವರಾಜ್, ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ, ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಸ್ಪರ್ಧೆಯಲ್ಲಿ ಇಲ್ಲ.
ನಳೀನ್ ಕುಮಾರ್ ಕಟೀಲ್, ಡಿ.ವಿ.ಸದಾನಂದ ಗೌಡ, ಪ್ರತಾಪ್ ಸಿಂಹ, ಮುನಿಸ್ವಾಮಿ, ನಟಿ ಸುಮಲತಾ ಅವರು ಪಕ್ಷದ ಟಿಕೆಟ್ ಸಿಗದ್ದಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಉಳಿದಂತೆ ಹಿರಿಯ ಸಂಸದರಾದ ವಿ.ಶ್ರೀನಿವಾಸ ಪ್ರಸಾದ್, ಬಿ.ಎನ್.ಬಚ್ಚೇಗೌಡ, ಜಿ.ಎಸ್.ಬಸವರಾಜ್, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಚುನಾವಣೆಯಿಂದ ತಾವೇ ಹಿಂದೆ ಸರಿದಿದ್ದಾರೆ.
ಮೊದಲ ಹಂತದ 14 ಲೋಕಸಭೆ ಕ್ಷೇತ್ರಗಳಲ್ಲಿ ಕೇವಲ 4 ಕ್ಷೇತ್ರಗಳಲ್ಲಿ ಮಾತ್ರ ಹಾಲಿ ಸಂಸದರು ಸ್ಪರ್ಧೆಯಲ್ಲಿದ್ದಾರೆ. ಹಾಸನದಲ್ಲಿ ಜೆಡಿಎಸ್ನ ಪ್ರಜ್ವಲ್ ರೇವಣ್ಣ, ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಸಂಸದ ಪಿ.ಸಿ.ಮೋಹನ್ ಪುನರಾಯ್ಕೆ ಬಯಸಿದ್ದಾರೆ. ಬೆಂಗಳೂರು ಉತ್ತರದಲ್ಲಿ ಸದಾನಂದಗೌಡರ ಬದಲಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಣದಲ್ಲಿದ್ದಾರೆ.
ಹೊಸ ಮುಖಗಳು: ಚಾಮರಾಜನಗರದಲ್ಲಿ ಸಂಸದ ಶ್ರೀನಿವಾಸ ಪ್ರಸಾದ್ ಬದಲಿಗೆ ಬಾಲರಾಜ್, ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಬದಲಿಗೆ ರಾಜಮನೆತನದ ಯದುವೀರ್ ಕೃಷ್ಣದತ್ತ ಒಡೆಯರ್, ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಜಾಗಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕೋಲಾರದಲ್ಲಿ ಸಂಸದ ಮುನಿಸ್ವಾಮಿ ಬದಲಿಗೆ ಜೆಡಿಎಸ್ ಮಲ್ಲೇಶ್ ಬಾಬು, ಚಿಕ್ಕಬಳ್ಳಾಪುರದಲ್ಲಿ ಹಾಲಿ ಸಂಸದ ಬಿ.ಎನ್.ಬಚ್ಚೇಗೌಡ ಅವರ ಜಾಗದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್, ತುಮಕೂರಿನಲ್ಲಿ ಹಾಲಿ ಸಂಸದ ಜಿ.ಎಸ್.ಬಸವರಾಜ್ ಬದಲಿಗೆ ಮಾಜಿ ಸಚಿವ ವಿ.ಸೋಮಣ್ಣ, ಚಿತ್ರದುರ್ಗದಲ್ಲಿ ಹಾಲಿ ಸಂಸದ, ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಬದಲಿಗೆ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ದಕ್ಷಿಣ ಕನ್ನಡದಲ್ಲಿ ನಳೀನ್ ಕುಮಾರ್ ಕಟೀಲ್ ಬದಲಿಗೆ ಬ್ರಿಜೇಶ್ ಚೌಟ, ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಬದಲಿಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸ್ಪರ್ಧಿಸಿದ್ದಾರೆ.
ಇದನ್ನೂ ಓದಿ: ನಾಳೆ ಲೋಕಸಭೆ ಚುನಾವಣೆಗೆ ಮತದಾನ: ಮತಗಟ್ಟೆಗಳತ್ತ ಇವಿಎಂ ಹಿಡಿದು ತೆರಳಿದ ಸಿಬ್ಬಂದಿ - Lok Sabha Election 2024