Ind vs Aus, 2nd Test: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಳೆಯಿಂದ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಮೊದಲ ಪಂದ್ಯ ಗೆದ್ದು ಬೀಗಿರುವ ಭಾರತ ಇದೀಗ ಪಿಂಕ್ ಬಾಲ್ ಟೆಸ್ಟ್ ಮೇಲೆ ಕಣ್ಣಿಟ್ಟಿದ್ದು, ಗೆಲುವಿಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದ ನಾಯಕ ರೋಹಿತ್ ಶರ್ಮಾ ತಂಡಕ್ಕೆ ವಾಪಸ್ ಆಗಿದ್ದಾರೆ. ಮತ್ತೊಂದೆಡೆ, ಕೈ ಬೆರಳ ಗಾಯಕ್ಕೆ ತುತ್ತಾಗಿದ್ದ ಶುಭಮನ್ ಗಿಲ್ ಕೂಡ ಚೇತರಿಸಿಕೊಂಡು ನೆಟ್ಸ್ನಲ್ಲಿ ಅಭ್ಯಾಸ ನಡೆಸಿದ್ದಾರೆ. ಇದರಿಂದಾಗಿ ಈ ಇಬ್ಬರು ಆಟಗಾರರು ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಾತ್ರಿಯಾಗಿದೆ. ಮೊದಲ ಪಂದ್ಯವನ್ನಾಡಿದ್ದ ದೇವದತ್ ಪಡಿಕ್ಕಲ್ ಮತ್ತು ಧ್ರುವ್ ಜುರೇಲ್ 2ನೇ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ.
ಜೈಸ್ವಾಲ್ ಜೊತೆ ಆರಂಭಿಕರಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದ್ದು, ಇದಕ್ಕೆ ನಾಯಕ ರೋಹಿತ್ ಶರ್ಮಾ ಉತ್ತರ ನೀಡಿದ್ದಾರೆ. ಅಡಿಲೇಡ್‌ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಎರಡನೇ ಟೆಸ್ಟ್‌ನಲ್ಲಿ ನಾನು ಓಪನರ್ ಆಗಿ ಕ್ರೀಸಿಗಿಳಿಯುವುದಿಲ್ಲ ಎಂದು ತಿಳಿಸಿದ್ದಾರೆ. ಪರ್ತ್ ಟೆಸ್ಟ್ ಪಂದ್ಯದಂತೆ ಕೆ.ಎಲ್.ರಾಹುಲ್ ಮತ್ತು ಜೈಸ್ವಾಲ್ ಆರಂಭಿಕರಾಗಿರಲಿದ್ದಾರೆ. ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಅಗ್ರ ಕ್ರಮಾಂಕದ ಆಟಗಾರರು ಮಿಂಚಿದರೆ ತಂಡ ಒಳ್ಳೆಯ ಸ್ಕೋರ್ ಕಲೆಹಾಕಬಹುದು. ಈ ಹಿನ್ನೆಲೆಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಾಗಿ ರೋಹಿತ್ ಶರ್ಮಾ ತಿಳಿಸಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಇಬ್ಬರ ಜೊತೆಯಾಟ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಹಾಗಾಗಿ, ಮಧ್ಯಮ ಕ್ರಮಾಂಕದಲ್ಲಿನ ಪರಿಸ್ಥಿತಿ ಗಮನಿಸಿ ಬ್ಯಾಟಿಂಗ್‌ಗಿಳಿಯುವುದಾಗಿ ಹೇಳಿದ್ದಾರೆ.
ನಿತೇಶ್ ರೆಡ್ಡಿ, ಹರ್ಷಿತ್ ರಾಣಾಗೆ ಮೆಚ್ಚುಗೆ: ಮುಂದುವರೆದು ಮಾತನಾಡಿದ ರೋಹಿತ್, ಯುವ ಆಟಗಾರರಾದ ಹರ್ಷಿತ್ ರಾಣಾ ಮತ್ತು ನಿತೀಶ್ ರೆಡ್ಡಿ ಅವರನ್ನು ಹೊಗಳಿದರು. ಹರ್ಷಿತ್ ಮತ್ತು ನಿತೀಶ್ ಅವರ ದೇಹಭಾಷೆ ನೋಡಿದರೆ ಅವರು ತಮ್ಮ ಮೊದಲ ಪಂದ್ಯವನ್ನು ಪರ್ತ್‌ನಲ್ಲಿ ಆಡುತ್ತಿದ್ದಾರೆ ಎಂದು ನನಗನ್ನಿಸಲಿಲ್ಲ. ಉತ್ತಮವಾಗಿ ಆಡಿದ್ದಾರೆ. ಟೆಸ್ಟ್ ಸರಣಿ ಗೆಲ್ಲಲು ಇಂತಹ ಆಟಗಾರರ ಅಗತ್ಯವಿದೆ ಎಂದರು.
ಇದನ್ನೂ ಓದಿ: 37 ಸಿಕ್ಸರ್, 18 ಬೌಂಡರಿ, 349 ರನ್: ಟಿ20 ಇತಿಹಾಸದಲ್ಲಿ ವಿಶ್ವದಾಖಲೆ ಬರೆದ ತಂಡ!