ಬೆಂಗಳೂರು: ಬಲಿಷ್ಠ ಮುಂಬೈ ಇಂಡಿಯನ್ಸ್ ಮಹಿಳೆಯರ ಆಲ್ರೌಂಡ್ ಆಟದ ಮುಂದೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ಮಹಿಳೆಯರ ಹೋರಾಟ ಸಾಕಾಗಲಿಲ್ಲ. ಇದರಿಂದ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮುಂಬೈ 7 ವಿಕೆಟ್ಗಳ ಗೆಲುವು ಕಂಡರೆ, ಮಹಿಳಾ ಇಂಡಿಯನ್ಸ್ ಪ್ರೀಮಿಯರ್ ಲೀಗ್ನಲ್ಲಿ (ಡಬ್ಲ್ಯೂಪಿಎಲ್) ಆರ್ಸಿಬಿ ಸತತ ಎರಡನೇ ಸೋಲು ಅನುಭವಿಸಿತು.
ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಬ್ಯಾಟಿಂಗ್ ವೈಫಲ್ಯ ಮತ್ತು ಮುಂಬೈ ಬಿಗಿ ದಾಳಿಗೆ ಸಿಲುಕಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 133 ರನ್ ಮಾತ್ರ ಗಳಿಸಿತು. ಇದನ್ನು ನಾಟ್ ಸೇವಿಯರ್ ಬ್ರಂಟ್ ನೇತೃತ್ವದ ತಂಡ 15 ಓವರ್ಗಳಲ್ಲಿ ಮೂರೇ ವಿಕೆಟ್ ಕಳೆದುಕೊಂಡು ದಾಟಿ ಗೆಲ್ಲುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು.
ಕೆರ್, ಬಾಟಿಯಾ ಅಬ್ಬರ: ಆರ್ಸಿಬಿ ಮಹಿಳೆಯರು ನೀಡಿದ ಸಾಧಾರಣ ಗುರಿ ಬೆನ್ನಟ್ಟಿದ ಮುಂಬೈ ಮಹಿಳೆಯರು ಬಿರುಸಿನ ಆಟವಾಡಿದರು. ಯಾಸ್ಟಿಕಾ ಭಾಟಿಯಾ (31) ಭರ್ಜರಿ ಆರಂಭ ನೀಡಿದರು. 4 ಬೌಂಡರಿ, 2 ಸಿಕ್ಸರ್ ಬಾರಿಸಿ ವಿಜೃಂಭಿಸಿದರು. ಮಧ್ಯಮ ಕ್ರಮಾಂಕದಲ್ಲಿ ಅಮೆಲಿಯಾ ಕೆರ್ ಆರ್ಸಿಬಿಯ ಪ್ರತಿ ಬೌಲರ್ಗಳನ್ನೂ ಬೆಂಡೆತ್ತಿದರು. ಕೇವಲ 24 ಎಸೆತಗಳಲ್ಲಿ ಔಟಾಗದೇ 40 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಹೈಲಿ ಮ್ಯಾಥ್ಯೂವ್ಸ್ 26, ನಾಯಕಿ ಬ್ರಂಟ್ 27 ರನ್ ಕಾಣಿಕೆ ನೀಡಿದರು.
ನಾಯಕಿ ಸ್ಮೃತಿ ಮಂಧಾನ ಅಲ್ಪ ಮೊತ್ತವನ್ನು ಉಳಿಸಿಕೊಳ್ಳಲು ಏನೇ ಕಸರತ್ತು ಮಾಡಿದರೂ ಗೆಲುವು ದಕ್ಕಲಿಲ್ಲ. ಇದಕ್ಕಾಗಿ ಅವರು 8 ಮಂದಿಯನ್ನು ಬೌಲಿಂಗ್ಗೆ ಬಳಸಿಕೊಂಡರು. ಟ್ರಂಪ್ ಕಾರ್ಡ್ ರೇಣುಕಾ ಸಿಂಗ್ 2 ಓವರ್ನಲ್ಲಿ 25 ರನ್ ನೀಡಿ ದುಬಾರಿಯಾದರೆ, ಎಲಿಸಿ ಪೆರ್ರಿ ಮಾತ್ರ 2 ಓವರ್ನಲ್ಲಿ 10 ರನ್ ನೀಡಿ ತುಸು ಬಿಗಿ ದಾಳಿ ನಡೆಸಿದರು.
ನೀರಸ ಬ್ಯಾಟಿಂಗ್: ಇದಕ್ಕೂ ಮೊದಲು ಬ್ಯಾಟಿಂಗ್ನಲ್ಲೂ ನೀರಸ ಪ್ರದರ್ಶನ ನೀಡಿದ ಆರ್ಸಿಬಿ ಮಹಿಳೆಯರು ಮುಂಬೈ ಮಹಿಳೆಯರ ಕರಾರುವಾಕ್ ದಾಳಿಗೆ ಸಿಲುಕಿದರು. ಎಲೆಸಿ ಪೆರ್ರಿ 44 ರನ್ ಸಿಡಿಸಿದ್ದೇ ಅತ್ಯಧಿಕ ರನ್ ಆಗಿತ್ತು. ಉಳಿದಂತೆ ಮಂಧಾನ 9, ಡಿವೈನ್ 9, ಮೇಘನಾ 11, ಮೋಲಿನ್ಯುಕ್ಸ್ 12, ವರೆಹಮ್ 27 ರನ್ ಗಳಿಸಿದರು. ನಾಯಕಿ ಬ್ರಂಟ್, ಪೂಜಾ ವಸ್ತ್ರಕಾರ್ ತಲಾ 2 ವಿಕೆಟ್ ಕಿತ್ತರೆ, ಉಳಿದವರು 7ರ ಸರಾಸರಿಯಲ್ಲಿ ರನ್ ನೀಡಿ ಆರ್ಸಿಬಿ ಪಡೆಯನ್ನು ಕಟ್ಟಿಹಾಕಿದರು.
ಆರ್ಸಿಬಿಗೆ ಸತತ 2ನೇ ಸೋಲು: ಆರ್ಸಿಬಿಗೆ ಇದು ಟೂರ್ನಿಯಲ್ಲಿ ಸತತ 2ನೇ ಸೋಲಾಗಿದೆ. ಮೊದಲು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತಿದ್ದ ತಂಡ ಆಡಿದ 4 ಪಂದ್ಯಗಳಲ್ಲಿ ತಲಾ 2 ಗೆಲುವು, ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ 4ರಲ್ಲಿ 3 ಗೆದ್ದು ಮೊದಲ ಸ್ಥಾನಕ್ಕೇರಿತು. ನಾಳೆ (ಮಾರ್ಚ್ 4) ಯುಪಿ ವಾರಿಯರ್ಸ್ ವಿರುದ್ಧ ಆರ್ಸಿಬಿ ಸೆಣಸಾಡಲಿದೆ.
ಇದನ್ನೂ ಓದಿ: ಲಖನೌ ತಂಡಕ್ಕೆ ಲ್ಯಾನ್ಸ್ ಕ್ಲುಸೆನರ್ ಸಹಾಯಕ ಕೋಚ್ ಆಗಿ ನೇಮಕ