ಬುಸ್ಟೊ ಆರ್ಸಿಜಿಯೊ (ಇಟಲಿ): ಇಲ್ಲಿ ನಡೆಯುತ್ತಿರುವ ವಿಶ್ವ ಒಲಿಂಪಿಕ್ ಬಾಕ್ಸಿಂಗ್ ಅರ್ಹತಾ ಟೂರ್ನಿಯಲ್ಲಿ ಪುರುಷರ 71 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ನಿಶಾಂತ್ ದೇವ್ 2021ರ ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ಅಮೆರಿಕದ ಒಮರಿ ಜೋನ್ಸ್ ವಿರುದ್ಧ 1-4 ಅಂತರದಿಂದ ಸೋಲನುಭವಿಸಿದ್ದಾರೆ. ಅಲ್ಲದೇ ಪ್ಯಾರಿಸ್ ಒಲಿಂಪಿಕ್ಸ್ನಿಂದ ಹೊರ ಬಿದ್ದಿದ್ದಾರೆ.
ಮೊದಲ ಎರಡು ಸುತ್ತುಗಳಲ್ಲಿ ಇಬ್ಬರ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿತು. ಮೊದಲ ಸುತ್ತಿನಲ್ಲಿ ಅಮೆರಿಕದ ಒಮರಿ ಆಕ್ರಮಣಕಾರಿ ಪ್ರದರ್ಶನ ತೋರಿ 5-0 ರಿಂದ ಉತ್ತಮ ಆರಂಭವನ್ನು ಪಡೆದರು. ಬಳಿಕ ಎರಡನೇ ಸುತ್ತಿನಲ್ಲಿ ಪುನರಾಗಮನ ಮಾಡಿದ ಒಮರಿ ವಿರುದ್ದ ಪ್ರತಿದಾಳಿ ನಡೆಸಿ ಎರಡನೇ ಸುತ್ತಿನಲ್ಲಿ 4-1 ಅಂಕಗಳಿಂದ ಗೆಲುವು ಸಾಧಿಸಿದರು.
ಇಬ್ಬರು ಬಾಕ್ಸ್ರ್ಗಳು ಆಕ್ರಮಣಕಾರಿ ಆಟ ಮುಂದುವರಿಸಿದ್ದರಿಂದ ಅಂತಿಮ ಸುತ್ತಿನಲ್ಲಿ ಕಠಿಣ ಪೈಪೋಟಿ ಏರ್ಪಟ್ಟಿತು. ಆದರೆ, ಕೊನೆಯ 60 ಸೆಕೆಂಡುಗಳನ್ನು ಸಂಪೂರ್ಣವಾಗಿ ಬಳಸಿಕೊಂಡ ಒಮರಿ ಪ್ರಬಲ ದಾಳಿಯನ್ನು ನಡೆಸಿ ನಿಶಾಂತ್ ವಿರುದ್ದ ಗೆಲುವು ಸಾಧಿಸಿದರು.
ಇದಕ್ಕೂ ಮುನ್ನ ಸೋಮವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಗ್ರೀಸ್ನ ಕ್ರಿಸ್ಟೋಸ್ ಕರೈಟಿಸ್ ವಿರುದ್ದ 5-0 ಅಂತರದಿಂದ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದರು. ಒಲಿಪಿಂಕ್ಸ್ ಅರ್ಹತಾ ಟೂರ್ನಿಯಲ್ಲಿ ಒಟ್ಟು ಒಂಬತ್ತು ಬಾಕ್ಸರ್‌ಗಳು ಭಾಗವಹಿಸಿದ್ದರು. ಈ ಪೈಕಿ 8 ಜನ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದರು.
ಭಾರತ ಈಗಾಗಲೇ ಪ್ಯಾರಿಸ್ ಒಲಿಂಪಿಕ್ 2024ಕ್ಕೆ ಬಾಕ್ಸಿಂಗ್ ಸ್ಪರ್ಧೆಗೆ ನಾಲ್ಕು ಸ್ಥಾನಗಳನ್ನು ಖಚಿತಪಡಿಸಿಕೊಂಡಿದೆ. ಇದರಲ್ಲಿ ನಿಖತ್ ಜರೀನ್ (50 ಕೆಜಿ), ಪ್ರೀತಿ (54 ಕೆಜಿ), ಪರ್ವೀನ್ ಹೂಡಾ (57 ಕೆಜಿ) ಮತ್ತು ಲೊವ್ಲಿನಾ ಬೊರ್ಗೊಹೈನ್ (75 ಕೆಜಿ) ಅವರ ಸ್ಥಾನ ಖಚಿತವಾಗಿದೆ.
ಮೇ 23 ರಿಂದ ಜೂನ್ 3 ರವರೆಗೆ ಬ್ಯಾಂಕಾಕ್‌ನಲ್ಲಿ ಎರಡನೇ ವಿಶ್ವ ಒಲಿಂಪಿಕ್ ಅರ್ಹತಾ ಟೂರ್ನಿ ನಡೆಯಲಿದ್ದು ಇದರಲ್ಲಿ ಮತ್ತಷ್ಟು ಭಾರತೀಯ ಬಾಕ್ಸರ್‌ಗಳು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: IPL 2024: ಈ ಬಾರಿ ಸನ್‌ರೈಸರ್ಸ್ ಹೈದರಾಬಾದ್ ತಂಡದ SWOT ಏನು?