ದುಬೈ: ಮೊದಲ ಪಂದ್ಯದಲ್ಲಿ ಸೋಲು ಕಂಡು ಟಿ-20 ವಿಶ್ವಕಪ್ನ ಗುಂಪು ಹಂತದಿಂದಲೇ ಹೊರಬೀಳುವ ಭೀತಿಯಲ್ಲಿದ್ದ ಭಾರತ ಇಂದು (ಭಾನುವಾರ) ನಡೆದ ಪಾಕಿಸ್ತಾನ ಮಹಿಳೆಯರ ವಿರುದ್ಧದ ಪಂದ್ಯದಲ್ಲಿ ಗೆದ್ದು ಟೂರ್ನಿಯಲ್ಲಿ ಮುಂದುವರೆದಿದೆ. ಮೊದಲ ಜಯದ ಮೂಲಕ ಸೆಮೀಸ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಮಹಿಳೆಯರು ಸಾಧಾರಣ ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 105 ರನ್ ಗಳಿಸಿತು. ಗೆಲ್ಲುವ ಛಲದೊಂದಿಗೆ ಗುರಿ ಬೆನ್ನತ್ತಿದ ಭಾರತದ ಮಹಿಳೆಯರು ಶೆಫಾಲಿ ವರ್ಮಾ, ಜೆಮಿಮಾ ರೋಡ್ರಿಗ್ಸ್, ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 18.5 ಓವರ್ಗೆ 4 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.
#TeamIndia are back to winning ways!
— BCCI Women (@BCCIWomen) October 6, 2024
A 6-wicket win against Pakistan in Dubai 👏👏
📸: ICC
Scorecard ▶️ https://t.co/eqdkvWWhTP#T20WorldCup | #INDvPAK | #WomenInBlue pic.twitter.com/0ff8DOJkPM
ಸಾಧಾರಣ ಗುರಿ ಇದ್ದರೂ ಭಾರತ ವನಿತೆಯರು ಉತ್ತಮ ಆರಂಭ ಪಡೆಯಲಿಲ್ಲ. ಶೆಫಾಲಿ ವರ್ಮಾ ಜೊತೆ ಇನಿಂಗ್ಸ್ ಆರಂಭಿಸಿದ ಉಪ ನಾಯಕಿ ಸ್ಮೃತಿ ಮಂಧನಾ 7 ರನ್ಗೆ ವಿಕೆಟ್ ನೀಡಿದರು. ಈ ವೇಳೆ ತಂಡದ ಮೊತ್ತ 18 ಆಗಿತ್ತು. ಮೂರನೇ ಸ್ಥಾನಕ್ಕೆ ಬಡ್ತಿ ಪಡೆದ ಜೆಮಿಮಾ ರೋಡ್ರಿಗ್ಸ್, ಶೆಫಾಲಿ ಜೊತೆಗೂಡಿ ಎಚ್ಚರಿಕೆಯ ಆಟವಾಡಿದರು. ಇಬ್ಬರೂ ಸೇರಿ 43 ರನ್ ಜೊತೆಯಾಟ ಆಡಿದರು.
ಶೆಫಾಲಿ 35 ಎಸೆತಗಳಲ್ಲಿ 32 ರನ್ ಗಳಿಸಿ ಔಟಾದರು. ಜೆಮಿಮಾ 28 ಎಸೆತಗಳಲ್ಲಿ 23 ರನ್ ಮಾಡಿದರು. 29 ರನ್ ಮಾಡಿದ್ದಾಗ ನಾಯಕಿ ಹರ್ಮನ್ಪ್ರೀತ್ ಕೌರ್ ಗೆಲುವಿನ ಕೊನೆಯಲ್ಲಿ ಗಾಯಕ್ಕೀಡಾದರು. ದೀಪ್ತಿ ಶರ್ಮಾ ಮತ್ತು ಸಂಜನಾ ಗೆಲುವಿನ ಶಾಸ್ತ್ರ ಮುಗಿಸಿದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ವನಿತೆಯರಿಗೆ ಅರುಂಧತಿ ರೆಡ್ಡಿ ಮತ್ತು ಶ್ರೇಯಾಂಕ ಪಾಟೀಲ್ ಬಿಗಿ ದಾಳಿ ಸವಾಲಾಯಿತು. ಮುನೀಬಾ ಅಲಿ 17, ಹಿರಿಯ ಆಟಗಾರ್ತಿ ನಿದಾ ದಾರ್ 28, ನಾಯಕಿ ಫಾತಿಮಾ ಸನಾ 13, ಸೈಯದ್ ಅರೂಬ್ ಶಾ 14 ರನ್ ಗಳಿಸಿದರು. ಭಾರತದ ಬೌಲಿಂಗ್ ಪಡೆಯ ದಾಳಿಗೆ ಸಿಲುಕಿದ ಪಾಕ್ ರನ್ ಗಳಿಸಲು ಪರದಾಡಿತು. ಅರುಂಧತಿ 3, ಶ್ರೇಯಾಂಕಾ 2 ವಿಕೆಟ್ ಪಡೆದರು.
ಖಾತೆ ತೆರೆದ ಭಾರತ: ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತದ ವನಿತೆಯರು 2 ಪಂದ್ಯ ಆಡಿದ್ದು, ಪಾಕ್ ವಿರುದ್ಧದ ಗೆಲುವಿನ ಮೂಲಕ ಖಾತೆ ತೆರೆದಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಎದುರು ಭಾರೀ ಅಂತರದಲ್ಲಿ ಸೋಲು ಕಂಡು ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಪಟ್ಟಿಯಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ, ಶ್ರೀಲಂಕಾ, ನ್ಯೂಜಿಲ್ಯಾಂಡ್ನಂತಹ ದೈತ್ಯ ತಂಡಗಳ ಜೊತೆ ಸ್ಥಾನ ಪಡೆದಿತ್ತು. 2 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ.
ಪಾಕ್ ವಿರುದ್ಧ ಗೆಲುವಿನ ಯಾತ್ರೆ: ಭಾರತ ಮತ್ತು ಪಾಕಿಸ್ತಾನ ಮಹಿಳೆಯರು ಈವರೆಗೆ ಟಿ-20 ವಿಶ್ವಕಪ್ನಲ್ಲಿ 9 ಬಾರಿ ಮುಖಾಮುಖಿಯಾಗಿದ್ದಾರೆ. ಇದರಲ್ಲಿ ಭಾರತ 6 ಬಾರಿ, ಪಾಕಿಸ್ತಾನ 2 ಬಾರಿ ಗೆಲುವು ಸಾಧಿಸಿ ಪ್ರಾಬಲ್ಯ ಮುಂದುವರಿಸಿವೆ.
ಇದನ್ನೂ ಓದಿ; ಮಹಿಳಾ ಟಿ20 ವಿಶ್ವಕಪ್: ಇಂದು ಭಾರತ-ಪಾಕ್ ಮ್ಯಾಚ್; ಸಮಯ, ನೇರಪ್ರಸಾರದ ಮಾಹಿತಿ - India vs Pakistan Match