ನವದೆಹಲಿ: ಮಹಿಳಾ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿಂದು ಶ್ರೀಲಂಕಾ ತಂಡ ಭಾರತ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಚೊಚ್ಚಲ ಬಾರಿಗೆ ಶ್ರೀಲಂಕಾ ಏಷ್ಯಾಕಪ್ ಮುಡಿಗೇರಿಸಿಕೊಂಡಿದೆ. ಶ್ರೀಲಂಕಾದ ರಂಗಿರಿ ದಂಬುಲ್ಲಾ ಅಂತಾರಾಷ್ಟ್ರೀಯ ಮೈದಾನದಲ್ಲಿ ಭಾನುವಾರ ನಡೆದೆ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 165 ರನ್ ಕಲೆಹಾಕಿತು. ಇದಕ್ಕುತ್ತವಾಗಿ ಶ್ರೀಲಂಕಾ 18.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 167ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು.
ಶ್ರೀಲಂಕಾ ಪರ ಬಿರುಸಿನ ಬ್ಯಾಟ್ ಮಾಡಿದ ಚಾಮರಿ ಅಟಪಟ್ಟು 43 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 61 ರನ್ ಗಳಿಸಿದರೇ, ಹರ್ಷಿತಾ ಸಮರವಿಕ್ರಮ 51 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 69 ರನ್ ಹಾಗೂ ಕವಿಶಾ ದಿಲ್ಹಾರಿ 16 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 30 ರನ್ ಗಳಿಸಿ ಅಜೇಯ ಇನಿಂಗ್ಸ್ ಆಡಿ ತಂಡದ ಗೆಲುವಿನಲ್ಲಿ ಪ್ರಮುಖ ಮಾತ್ರ ವಹಿಸಿದರು.
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತದ ಸ್ಮೃತಿ ಮಂದಾನ (69), ರೋಡ್ರಿಗಾಸ್, ರಿಚಾ ಘೋಷ್ ಹೊರತುಪಡಿಸಿ ಯಾವೊಬ್ಬ ಬ್ಯಾಟರ್ಗಳು ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದಿದ್ದ ಮಂದಾನ 47 ಎಸೆತಗಳಲ್ಲಿ 10 ಬೌಂಡರಿಯೊಂದಿಗೆ ಆಕರ್ಷಕ ಅರ್ಧಶತಕ ಪೂರೈಸಿದರು. ಮಧ್ಯಮ ಕ್ರಮಾಂಕದಲ್ಲಿ ರೋಡ್ರಿಗಾಸ್ 29, ರಿಚಾ ಘೋಷ್ 30 ರನ್ಗಳ ಕೊಡುಗೆ ನೀಡಿದರು. ಉಳಿದಂತೆ ಶೆಫಾಲಿ (16), ಉಮಾ ಚೆಟ್ರಿ (9), ಹರ್ಮನ್‌ಪ್ರೀತ್ ಕೌರ್ (11), ಪೂಜಾ ವಸ್ತ್ರಾಕರ್ (5), ರಾಧ ಯಾದವ್ (1) ಹೇಳಿಕೊಳ್ಳವಂತಹ ಪ್ರದರ್ಶನ ತೋರಲಿಲ್ಲ. ಬೌಲಿಂಗ್ನಲ್ಲಿ ಶ್ರೀಲಂಕಾ ಪರ ಕವಿಶಾ ದಿಲ್ಹಾರಿ 2 ವಿಕೆಟ್ ಪಡೆದು ಮಿಂಚಿದರು. ಇದೇ ಮೊದಲ ಬಾರಿಗೆ ಮಹಿಳಾ ಏಷ್ಯಾಕಪ್‌ನ ಫೈನಲ್‌ನಲ್ಲಿ ಶ್ರೀಲಂಕಾ ತಂಡ ಭಾರತದ ವಿರುದ್ಧ ಜಯ ಸಾಧಿಸಿತು.
ತಂಡಗಳು - ಶ್ರೀಲಂಕಾ: ವಿಶಾಮಿ ಗುಣರತ್ನೆ, ಚಮರಿ ಅಥಾಪತ್ತು (ನಾಯಕಿ), ಹರ್ಷಿತಾ ಸಮರವಿಕ್ರಮ, ಕವಿಶಾ ದಿಲ್ಹಾರಿ, ನೀಲಾಕ್ಷಿ ಡಿ ಸಿಲ್ವಾ, ಅನುಷ್ಕಾ ಸಂಜೀವನಿ (ಪ), ಹಾಸಿನಿ ಪೆರೆರಾ, ಸುಗಂಧಿಕಾ ಕುಮಾರಿ, ಇನೋಶಿ ಪ್ರಿಯದರ್ಶಿನಿ, ಉದೇಶಿಕಾ ಪ್ರಬೋಧನಿ, ಸಚಿನಿ ನಿಸ್ಸಾಲ.
ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಉಮಾ ಛೆಟ್ರಿ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ಪ), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ತನುಜಾ ಕನ್ವರ್, ರೇಣುಕಾ ಠಾಕೂರ್ ಸಿಂಗ್.
ಇದನ್ನೂ ಓದಿ: ಸೂಪರ್ ಸಿಂಧು! ಪ್ಯಾರಿಸ್ ಒಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ.ಸಿಂಧು ಶುಭಾರಂಭ - P V Sindhu