ನ್ಯೂಯಾರ್ಕ್: ಭಾರತದ ಸಮವಸ್ತ್ರ ಧರಿಸಿ ಆಡುವುದೇ ವಿಭಿನ್ನ ಅನುಭವ. ಈ ಕ್ಷಣವನ್ನು ಇಷ್ಟು ದಿನಗಳ ಕಾಲ ತುಂಬಾ ಮಿಸ್ ಮಾಡಿಕೊಂಡಿದ್ದೆ. ಈಗ ಉತ್ತಮ ಪ್ರದರ್ಶನ ನೀಡುವ ಭರವಸೆಯಿದೆ ಎಂದು ರಿಷಭ್ ಪಂತ್ ಹರ್ಷ ವ್ಯಕ್ತಪಡಿಸಿದ್ದಾರೆ.
ಬಿಸಿಸಿಐ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಪ್ರತಿಕ್ರಿಯಿಸಿರುವ ಪಂತ್, ತಂಡವನ್ನು ಸೇರಿಕೊಂಡಿರುವುದು, ಮತ್ತೆ ಸಹ ಆಟಗಾರರೊಂದಿಗೆ ಸಮಯ ಕಳೆಯಲು ಸಾಧ್ಯವಾಗಿರುವುದು, ಪರಸ್ಪರ ತಮಾಷೆ, ಸಂಭಾಷಣೆ, ನಿಜಕ್ಕೂ ಈ ಎಲ್ಲ ಕ್ಷಣಗಳನ್ನು ಆನಂದಿಸುತ್ತಿದ್ದೇನೆ ಎಂದು ಭಾವನಾತ್ಮಕ ಮಾತುಗಳನ್ನಾಡಿದ್ದಾರೆ.
ನಾವು ಕೆಲವು ದೇಶಗಳಲ್ಲಿ ಆಡಿರುವ ಅಭ್ಯಾಸವಿದೆ. ಆದರೆ, ಟಿ20 ವಿಶ್ವಕಪ್‌ನಲ್ಲಿ ನಾವು ವಿಭಿನ್ನ ರೀತಿಯ ಆಟವನ್ನು ಆಡಬೇಕಾಗಿದೆ ಎಂದು ಪಂತ್ ಇದೇ ವೇಳೆ ಸಂತಸ ವ್ಯಕ್ತಪಡಿಸಿದ್ದಾರೆ.
ಗಾಯಗೊಂಡಾಗ ಬೆಂಗಳೂರು ಮೂಲದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಾವು ಕಳೆದ ದಿನಮಾನಗಳನ್ನು, ಒಂಟಿತನವನ್ನು ನಿಭಾಯಿಸಲು ತಾವು ತೆಗೆದುಕೊಂಡ ನಿರ್ಧಾರಗಳನ್ನು ಇದೇ ವೇಳೆ ಅವರು ನೆನಪಿಸಿಕೊಂಡರು. ಸೂರ್ಯಕುಮಾರ್ ಯಾದವ್ ಕೂಡ ಈ ಸಂವಾದಲ್ಲಿದ್ದರು.
ಜೂನ್ 5 ರಂದು ನಸ್ಸೌ ಕೌಂಟಿ ಮೈದಾನದಲ್ಲಿ ಐರ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ 2024ರ ಮೊದಲ ಪಂದ್ಯದಲ್ಲಿ ರಿಷಭ್ ಪಂತ್ ಟೀಂ ಇಂಡಿಯಾ ಪರ ಆಡಲಿದ್ದಾರೆ. ಈ ಮೆಗಾ ಟೂರ್ನಿಗೂ ಮುನ್ನ ಪಂತ್ ನ್ಯೂಯಾರ್ಕ್‌ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ.
ಇದನ್ನೂ ಓದಿ: ನ್ಯೂಯಾರ್ಕ್‌ಗೆ ಬಂದಿಳಿದ ರಿಂಕು ಸಿಂಗ್; 15 ಸದಸ್ಯರ ಬಳಗದಿಂದ ಕೈಬಿಟ್ಟಿದ್ದಕ್ಕೆ ಹಲವರ ಬೇಸರ - T20 World Cup 2024