ನವದೆಹಲಿ: 18ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಇನ್ನೂ 6 ತಿಂಗಳು ಬಾಕಿ ಉಳಿದಿದ್ದು ಈಗಿನಿಂದಲೇ ಕ್ರೀಡಾಭಿಮಾನಿಗಳು ಒಂದಿಲ್ಲೊಂದು ವಿಷಯಗಳಿಂದ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ರಂತಹ ಹಲವಾರು ಸ್ಟಾರ್ ಆಟಗಾರರು ಈ ಬಾರಿ ತಮ್ಮ ಫ್ರಾಂಚೈಸಿಗಳನ್ನು ಬದಲಿಸಿ ಬೇರೆ ತಂಡಗಳಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಊಹಾಪೋಹಗಳೇ ಹೆಚ್ಚಾಗಿವೆ.
ಏತನ್ಮಧ್ಯೆ, ರಿಟೈನ್ಗೆ ಸಂಬಂಧಿಸಿದಂತೆ ಈ ತಿಂಗಳಾಂತ್ಯದೊಳಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೂತನ ನಿಯಮ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸೋರಿಕೆಯಾದ ಮಾಹಿತಿ ಪ್ರಕಾರ, ತಲಾ ಫ್ರಾಂಚೈಸಿಗಳು ಐವರು ಆಟಗಾರರನ್ನು ಉಳಿಸಿಕೊಳ್ಳಬಹುದು. ಒಂದು ವೇಳೆ ಈ ನಿಯಮ ಜಾರಿ ಆದದ್ದೇ ಆದಲ್ಲಿ ಐವರು ಆಟಗಾರರನ್ನು ಹೊರತುಪಡಿಸಿ ಉಳಿದವರನ್ನು ತಂಡದಿಂದ ಕೈಬಿಡಬೇಕಾಗುತ್ತದೆ. ಹಾಗಾಗಿ ತಂಡಗಳು ತಮ್ಮ ಕೋರ್ ಅನ್ನು ಹೇಗೆ ಉಳಿಸಿಕೊಳ್ಳುತ್ತವೆ ಎಂಬುದರ ಕುರಿತು ಸಾಕಷ್ಟು ಜಿಜ್ಞಾಸೆ ಹುಟ್ಟುಕೊಂಡಿದೆ. ಇವುಗಳ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ರಿಷಭ್ ಪಂತ್ ಕುರಿತ ಪೋಸ್ಟ್ ಹರಿದಾಡಲಾರಂಭಿಸಿದೆ.
🚨 Rishabh Pant approached RCB 🚨
— Rajiv (@Rajiv1841) September 26, 2024
- Pant approached RCB through his manager earlier this week as he foresee a captaincy vacancy there but got declined by RCB's management.
Virat doesn't want Pant in RCB due to his Political Tactics in Indian team as well as in DC.
- RCB Source pic.twitter.com/B6KY2gj4gp
ಹೌದು, ಈ ವಾರದ ಆರಂಭದಲ್ಲಿ ಪಂತ್ ತಮ್ಮ ಮ್ಯಾನೇಜರ್ ಮೂಲಕ ಆರ್‌ಸಿಬಿ ಮ್ಯಾನೇಜ್ಮೆಂಟ್ ಅನ್ನು ಸಂಪರ್ಕಿಸಿದ್ದರು. ಅಲ್ಲದೇ ತಂಡದ ನಾಯಕನಾಗುವ ಬಯಕೆ ವ್ಯಕ್ತಪಡಿಸಿದ್ದರು ಎಂದು ಎಕ್ಸ್‌ನಲ್ಲಿ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಆದರೆ ಆರ್‌ಸಿಬಿ ಇದಕ್ಕೆ ಆಸಕ್ತಿ ತೋರಿಸಲಿಲ್ಲ. ಅಲ್ಲದೇ ಪಂತ್ ಆರ್‌ಸಿಬಿಗೆ ಬರುವುದು ಕೂಡ ರನ್ ಮಷಿನ್ ವಿರಾಟ್ ಕೊಹ್ಲಿಗೆ ಇಷ್ಟವಿಲ್ಲ ಎಂದು ರಾಜೀವ್ ಎಂಬ ಬಳಕೆದಾರ ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಮೌನ ಮುರಿದ ಪಂತ್: ಈ ವೈರಲ್ ಪೋಸ್ಟ್ ಬೆನ್ನಲ್ಲೇ ರಿಷಭ್ ಪಂತ್ ಮೌನ ಮುರಿದಿದ್ದು ತಮ್ಮ ಎಕ್ಸ್ ಖಾತೆಯಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ಸುಳ್ಳು ಸುದ್ದಿ. ಯಾಕೆ ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿದ್ದೀರಿ. ವಿನಾಕಾರಣ ಇಂತಹ ವಾತಾವರಣ ನಿರ್ಮಾಣ ಮಾಡಬೇಡಿ. ಬುದ್ದಿವಂತರೇ ಏನಾದರೂ ಸುದ್ದಿಯನ್ನು ಹರಿಬಿಡುವ ಮೊದಲು ಹಲವಾರು ಬಾರಿ ಪರಿಶೀಲಿಸಿ. ದಿನಕಳೆದಂತೆ ಇಂತಹ ಸುಳ್ಳು ಸುದ್ದಿಗಳ ಹಾವಳಿ ಹೆಚ್ಚಾಗುತ್ತಿದೆ. ಇದು ಕೇವಲ ಒಬ್ಬರಿಗೆ ಮಾತ್ರವಲ್ಲ ಇಂತಹ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿರುವ ಪ್ರತಿಯೊಬ್ಬರಿಗೂ ಹೇಳುತ್ತಿದ್ದೇನೆ. ಯಾವುದೇ ಸುದ್ದಿಯಾಗಿರಲಿ ಒಮ್ಮೆ ಪರಿಶೀಲಿಸುವುದು ಉತ್ತಮ ಎಂದು ಪ್ರತಿಕ್ರಿಯೆ ನೀಡಿದ್ದಾರೆ.