ನವದೆಹಲಿ: ಟಿ20 ವಿಶ್ವಕಪ್ ಗೆದ್ದು ಸ್ವದೇಶಕ್ಕೆ ಬಂದಿಳಿದಿರುವ ಟೀಂ ಇಂಡಿಯಾ, ಇಂದು ಪ್ರಧಾನಿ ಮೋದಿ ಅವರ ನಿವಾಸಕ್ಕೆ ಭೇಟಿ ಮಾಡಿತು. ವಿಶ್ವಕಪ್ ಗೆದ್ದು ಬಂದ ಭಾರತ ತಂಡಕ್ಕೆ ಪ್ರಧಾನಿ ಮೋದಿ ಅವರು ತಮ್ಮ ನಿವಾಸದಲ್ಲಿ ಔತಣಕೂಟಕ್ಕೆ ಆಹ್ವಾನಿಸಿದ್ದರು. ಅದರಂತೆ ಬೆಳಗ್ಗೆ 11 ಗಂಟೆಗೆ ಟೀಂ ಇಂಡಿಯಾದ ಆಟಗಾರರು ಮತ್ತು ಕೋಚ್ ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ವಿಶ್ವಕಪ್ ಜಯಿಸಿದ ಟೀಂ ಇಂಡಿಯಾದ ಎಲ್ಲಾ ಸದಸ್ಯರಿಗೂ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಟೀಂ ಇಂಡಿಯಾ ಆಟಗಾರರು ಪ್ರಧಾನಿ ಅವರನ್ನು ಭೇಟಿ ಮಾಡಿರುವ ವಿಡಿಯೋ ಸಹ ಬಿಡುಗಡೆಯಾಗಿದೆ.
ಒಂದೂವರೆ ನಿಮಿಷದ ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಟೀಂ ಇಂಡಿಯಾ ಸದಸ್ಯರೊಂದಿಗೆ ಮಾತನಾಡುತ್ತಿರುವುದು ಕಂಡು ಬಂದಿದೆ. ಟ್ರೋಫಿಯೊಂದಿಗೆ ರೋಹಿತ್ ಶರ್ಮಾ ಪ್ರಧಾನಿ ಅವರ ನಿವಾಸಕ್ಕೆ ಪ್ರವೇಶ ಮಾಡುತ್ತಿರುವುದರಿಂದ ವಿಡಿಯೋ ಪ್ರಾರಂಭವಾಗುತ್ತದೆ. ಇದರ ನಂತರ ಉಳಿದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಕೂಡ ಒಳಗೆ ಪ್ರವೇಶ ಮಾಡುತ್ತಿರುವುದು ಕಂಡು ಬರುತ್ತದೆ. ಇವರಲ್ಲಿ ಕೋಚ್ ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ರಿಷಬ್ ಪಂತ್ ಮುಂತಾದ ಆಟಗಾರರು ಕಾಣಿಸಿಕೊಂಡಿದ್ದಾರೆ.
ಇದಾದ ಬಳಿಕ ಪ್ರಧಾನಿ ಮೋದಿ ಅವರು ಆಟಗಾರರು ಕುಳಿತಿರುವ ಹಾಲ್ಗೆ ಪ್ರವೇಶಿಸುತ್ತಾರೆ. ನಂತರ ಇಡೀ ತಂಡದ ಜತೆ ಪ್ರಧಾನಿ ಮಾತುಕತೆ ನಡೆಸಿದ್ದು, ಬಳಿಕ ಪ್ರಧಾನಿ ಮೋದಿಯವರೊಂದಿಗೆ ಇಡೀ ತಂಡ ಫೋಟೋ ಕ್ಲಿಕ್ಕಿಸಿಕೊಳ್ಳುತ್ತದೆ. ಈ ವೇಳೆ ರೋಹಿತ್ ಮತ್ತು ದ್ರಾವಿಡ್ ವಿಶ್ವಕಪ್ ಟ್ರೋಫಿಯನ್ನು ಪ್ರಧಾನಿಗೆ ಹಸ್ತಾಂತರಿಸಿರುವುದು. ಜಯ್ ಶಾ ಮತ್ತು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಕೂಡ ಇದರಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಧಾನಿ ಅವರ ಭೇಟಿ ನಂತರ ಭಾರತ ಕ್ರಿಕೆಟ್ ತಂಡವು ಲೋಕ ಕಲ್ಯಾಣ ಮಾರ್ಗದಿಂದ ನಿರ್ಗಮಿಸಿದ್ದು, ಇದೀಗ ವಿಶೇಷ ವಿಮಾನದ ಮೂಲಕ ಇಡೀ ತಂಡ ಮುಂಬೈಗೆ ಪ್ರಯಾಣ ಬೆಳೆಸಲಿದೆ. ಮುಂಬೈಗೆ ತಲುಪಿದ ಬಳಿಕ ಸಂಜೆ 5 ಗಂಟೆಗೆ ತೆರೆದ ವಾಹನದಲ್ಲಿ ಟೀಂ ಇಂಡಿಯಾ ವಿಜಯೋತ್ಸವದ ಮೆರವಣಿಗೆ ನಡೆಸಲಿದೆ. ಈ ಮೆರವಣಿಗೆಯ ನಂತರ ವಾಂಖೆಡೆ ಸ್ಟೇಡಿಯಂಗೆ ತಲುಪಲಿದ್ದು ಅಲ್ಲಿ ಪ್ರಸ್ತುತಿ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ರೋಹಿತ್ ಶರ್ಮಾ ವಿಶ್ವಕಪ್ ಟ್ರೋಫಿಯನ್ನು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಅವರಿಗೆ ಹಸ್ತಾಂತರಿಸಲಿದ್ದಾರೆ.
ಇದನ್ನೂ ಓದಿ: ಟಿ20 ವಿಶ್ವಕಪ್ನೊಂದಿಗೆ ಸ್ವದೇಶಕ್ಕೆ ಬಂದಿಳಿದ ಟೀಂ ಇಂಡಿಯಾ - TEAM INDIA ARRIVAL