ಹೈದರಾಬಾದ್: ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ನಾಲ್ಕು ಬಲಿಷ್ಠ ತಂಡಗಳು ಸೆಮಿಫೈನಲ್ ತಲುಪಿದ್ದು, ಚಾಂಪಿಯನ್ ಯಾರೆಂಬ ಪ್ರಶ್ನೆಗೆ ಇನ್ನೆರಡೇ ಹೆಜ್ಜೆ ದೂರ. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಭಾರತ ಈಗಾಗಲೇ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದವು. ಇಂದು (ಜೂನ್ 25) ನಡೆದ ರೋಚಕ ಪಂದ್ಯದಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಇದೇ ಮೊದಲ ಬಾರಿಗೆ ಸೆಮೀಸ್ಗೆ ಎಂಟ್ರಿ ಕೊಟ್ಟಿದೆ.
ಇದರಿಂದ ನಾಲ್ಕು ತಂಡಗಳು ನಾಲ್ಕರ ಘಟ್ಟದಲ್ಲಿ ಸ್ಥಾನ ಭದ್ರಮಾಡಿಕೊಂಡಿವೆ. ಜೂನ್ 27ರಂದು ಬೆಳಗ್ಗೆ 6 ಗಂಟೆಗೆ (ಭಾರತೀಯ ಕಾಲಮಾನ) ನಡೆಯುವ ಮೊದಲ ಸೆಮೀಸ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ಎದುರಾದರೆ, ಅದೇ ದಿನ ರಾತ್ರಿ 8 ಗಂಟೆಗೆ ನಡೆಯುವ 2ನೇ ಸೆಮೀಸ್‌ನಲ್ಲಿ ಇಂಡಿಯಾ ಮತ್ತು ಇಂಗ್ಲೆಂಡ್ ಸೆಣಸಾಡಲಿವೆ. ಇಲ್ಲಿ ಗೆಲ್ಲುವ ತಂಡಗಳು ಫೈನಲ್ ಟಿಕೆಟ್ ಪಡೆಯಲಿದ್ದು, ಜೂನ್ 29ರಂದು ಪಂದ್ಯ ನಡೆಯಲಿದೆ. ವಿಶೇಷವೆಂದರೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ಟೂರ್ನಿಯ ಆರಂಭದಿಂದ ನಡೆದ ಏಳು ಪಂದ್ಯಗಳನ್ನು ಗೆದ್ದು ಸೋಲೇ ಕಾಣದೆ ಸೆಮೀಸ್ಗೆ ಬಂದಿವೆ.
The second semi-final is locked in 🔐
— T20 World Cup (@T20WorldCup) June 24, 2024
India and England will battle it out in Guyana for a place in the #T20WorldCup Final 2024 🇮🇳🏴 pic.twitter.com/4PQg2228Ao
ತಂಡಗಳ ಸೆಮೀಸ್ ಹಾದಿ ಹೀಗಿದೆ: ಸೂಪರ್-8 ಹಂತದಲ್ಲಿ 8 ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿತ್ತು. ಮೊದಲ ಗುಂಪಿನಲ್ಲಿ ಭಾರತ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ ಸ್ಥಾನ ಪಡೆದಿದ್ದರೆ, ಎರಡನೇ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆತಿಥೇಯ ತಂಡಗಳಾದ ವೆಸ್ಟ್ ಇಂಡೀಸ್ ಮತ್ತು ಅಮೆರಿಕಗಳಿದ್ದವು.
ತಲಾ ಮೂರು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಮೂರರಲ್ಲೂ ಗೆಲುವು ಸಾಧಿಸಿ, 6 ಅಂಕಗಳೊಂದಿಗೆ ಈವರೆಗೂ ಟೂರ್ನಿಯಲ್ಲಿ ಸೋಲರಿಯದೇ ಸೆಮೀಸ್ಗೆ ಬಂದಿದೆ. ಆಂಗ್ಲ ಪಡೆಯು ದಕ್ಷಿಣ ಆಫ್ರಿಕಾ ವಿರುದ್ಧ ಸೋತು, ವೆಸ್ಟ್ ಇಂಡೀಸ್ ಮತ್ತು ಅಮೆರಿಕ ವಿರುದ್ಧ ಗೆದ್ದು 4 ಅಂಕಗಳೊಂದಿಗೆ ನಾಲ್ಕರ ಘಟ್ಟ ತಲುಪಿದೆ.
ಇತ್ತ ಎ ಗುಂಪಿನಲ್ಲಿದ್ದ ಬಲಿಷ್ಠ ಭಾರತ ಮೊದಲು ಬಾಂಗ್ಲಾದೇಶ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾವನ್ನು ಸದೆಬಡಿದು 6 ಅಂಕಗಳನ್ನು ಸಂಪಾದಿಸಿ ವಿಶ್ವಕಪ್ನಲ್ಲಿ ಸೋಲಿಲ್ಲದ ಸರದಾರನಾಗಿ ಸೆಮೀಸ್ಗೆ ಬಂದಿದೆ. ಆಸೀಸ್, ಬಾಂಗ್ಲಾ ಮತ್ತು ಅಫ್ಘನ್ಗೆ ಸಮಾನ ಅವಕಾಶವಿದ್ಧ ಹೋರಾಟದಲ್ಲಿ ಅಫ್ಘಾನಿಸ್ತಾನ ತನ್ನ ಕೊನೆಯ ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು ಬೇಟೆಯಾಡಿ ಕ್ರಿಕೆಟ್ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ.
ಆಸೀಸ್, ವಿಂಡೀಸ್ಗೆ ನಿರಾಸೆ: ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ಮುಖಭಂಗ ಅನುಭವಿಸಿದರೆ, ಆತಿಥೇಯ ದೈತ್ಯ ವೆಸ್ಟ್ಇಂಡೀಸ್ ತವರಿನಲ್ಲೇ ನಿರಾಸೆಗೆ ಒಳಗಾಯಿತು. ಈ ಮೂಲಕ 7 ಆವೃತ್ತಿಗಳಲ್ಲಿ ಯಾವುದೇ ಆತಿಥೇಯ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಲು ವಿಫಲವಾಗಿವೆ. ಹರಿಣಗಳ ಪಡೆ 10 ವರ್ಷಗಳ ಬಳಿಕ ಸೆಮೀಸ್ಗೆ ಬಂದಿದೆ. 2014 ರಲ್ಲಿ ಸೆಮೀಸ್ಗೆ ಬಂದಿದ್ದ ತಂಡ ಅದಾದ ಬಳಿಕ 2ನೇ ಸುತ್ತಿನಲ್ಲೇ ಹೊರಬಿದ್ದು ಚೋಕರ್ಸ್ ಪಟ್ಟಿ ಕಟ್ಟಿಕೊಂಡಿತ್ತು. ಟಿ20 ವಿಶ್ವಕಪ್ನಲ್ಲಿ ಸತತ 7 ಪಂದ್ಯಗಳನ್ನು ಗೆದ್ದ ತಂಡಗಳಾಗಿ ಭಾರತ, ದಕ್ಷಿಣ ಆಫ್ರಿಕಾ ಗುರುತಿಸಿಕೊಂಡಿವೆ.