ಹೈದರಾಬಾದ್: ಟಿ20 ವಿಶ್ವಕಪ್ ಮಹಾ ಸಂಗ್ರಾಮ ಆರಂಭವಾಗಿದೆ. ಒಟ್ಟು 20 ತಂಡಗಳು ಕಪ್ಗಾಗಿ ಸೆಣಸಾಡುತ್ತಿವೆ. ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2024ರ ಪುರುಷರ ಟಿ20 ವಿಶ್ವಕಪ್ ಟೂರ್ನಿಗಾಗಿ ದಾಖಲೆಯ 11.25 ಮಿಲಿಯನ್ ಡಾಲರ್ (93.47 ಕೋಟಿ ರೂ.) ಬಹುಮಾನ ಮೊತ್ತವನ್ನು ಪ್ರಕಟಿಸಿತು.
ಇದರಲ್ಲಿ ಟೂರ್ನಿ ಜಯಿಸಿದ ತಂಡ 2.45 ಮಿಲಿಯನ್ ಡಾಲರ್ (20.37 ಕೋಟಿ ರೂ.) ರನ್ನರ್ ಅಪ್ ತಂಡ 1.28 ಮಿಲಿಯನ್ ಡಾಲರ್ (10.64 ಕೋಟಿ ರೂ.) ಬಹುಮಾನ ಪಡೆಯಲಿವೆ.
ಸೆಮಿಫೈನಲ್ನಲ್ಲಿ ಸೋತ ತಂಡಗಳು ತಲಾ 7,87,500 ಡಾಲರ್ (6.74 ಕೋಟಿ ರೂ.) ಬಹುಮಾನ ಪಡೆಯಲಿವೆ. ಪಂದ್ಯಾವಳಿಯ ಸೂಪರ್-8 ಸುತ್ತಿನಲ್ಲಿ ಭಾಗವಹಿಸುವ ತಂಡಗಳು ತಲಾ 382,500 ಡಾಲರ್ (3.07 ಕೋಟಿ ರೂ.) ಮತ್ತು 9ನೇ ಮತ್ತು 12 ನೇ ಸ್ಥಾನದ ನಡುವೆ ಸ್ಥಾನ ಪಡೆಯುವ ತಂಡಗಳು ತಲಾ 247,500 ಡಾಲರ್ (2.05 ಕೋಟಿ ರೂ.) ಪಡೆಯಲಿವೆ.
13ರಿಂದ 20ನೇ ಸ್ಥಾನದಲ್ಲಿರುವ ತಂಡಗಳು ತಲಾ 225,000 ಡಾಲರ್ (1.87 ಕೋಟಿ ರೂ) ಗಳಿಸಲಿವೆ. ಇದಲ್ಲದೆ, ಸೆಮಿಫೈನಲ್ ಮತ್ತು ಫೈನಲ್ ಹೊರತುಪಡಿಸಿ ಪ್ರತೀ ತಂಡ ಗೆದ್ದ ಪ್ರತೀ ಪಂದ್ಯಕ್ಕೆ ಹೆಚ್ಚುವರಿಯಾಗಿ 31,154 ಡಾಲರ್ (25.89 ಲಕ್ಷ ರೂ) ಪಡೆಯುತ್ತವೆ.
"ಈ ಟೂರ್ನಿ ಅನೇಕ ರೀತಿಯಲ್ಲಿ ಐತಿಹಾಸಿಕವಾಗಿದೆ. ಆದ್ದರಿಂದ ಆಟಗಾರರಿಗೆ ನೀಡುವ ಬಹುಮಾನದ ಮೊತ್ತವೂ ಅದನ್ನು ಪ್ರತಿಬಿಂಬಿಸುವುದು ಸೂಕ್ತವಾಗಿದೆ. ವಿಶ್ವಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಆಟಗಾರರು ರಂಜಿಸಲಿದ್ದಾರೆ. ಇದು 'ಔಟ್ ಆಫ್ ದಿ ವರ್ಲ್ಡ್ ಈವೆಂಟ್' ಎಂದು ನಾವು ಭಾವಿಸುತ್ತೇವೆ" ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಜೆಫ್ ಅಲ್ಲಾರ್ಡಿಸ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರೂಪ್ ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ನಂತರ ಸೂಪರ್-8 ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ. ಇದಾದ ನಂತರದಲ್ಲಿ ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ಗಯಾನಾದಲ್ಲಿ ಸೆಮಿಫೈನಲ್ ಸೇರಿದಂತೆ ನಾಕೌಟ್ ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯವು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆಯಲಿದೆ. ಕೆರಿಬಿಯನ್ ದ್ವೀಪಗಳು ಮತ್ತು ಅಮೆರಿಕದ ಒಂಬತ್ತು ಸ್ಥಳಗಳಲ್ಲಿ ಒಟ್ಟು 20 ತಂಡಗಳು 28 ದಿನಗಳ ಕಾಲ ಕಪ್ಗಾಗಿ ಹೋರಾಟ ನಡೆಸಲಿವೆ.
ಇದನ್ನೂ ಓದಿ: T20 World Cup: ಇಂದು ಶ್ರೀಲಂಕಾ Vs ದಕ್ಷಿಣ ಆಫ್ರಿಕಾ ಮೊದಲ ಬಿಗ್ ಫೈಟ್ - SL VS RSA