ಗಯಾನಾ (ವೆಸ್ಟ್ ಇಂಡೀಸ್): ಐಸಿಸಿ ಟಿ20 ವಿಶ್ವಕಪ್‌ನ ಸಿ ಗುಂಪಿನ ಪಂದ್ಯದಲ್ಲಿ ಅಫ್ಘಾನಿಸ್ತಾನವು ನ್ಯೂಜಿಲೆಂಡ್ ತಂಡಕ್ಕೆ ಆಘಾತ ನೀಡಿದ್ದು, 84 ರನ್‌ಗಳ ಗೆಲುವು ದಾಖಲಿಸಿದೆ. ಶುಕ್ರವಾರ ಇಲ್ಲಿನ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಪಿನ್ನರ್ ರಶೀದ್ ಖಾನ್ ಮತ್ತು ವೇಗಿ ಫಜಲ್ಹಕ್ ಫಾರೂಕಿ ದಾಳಿಗೆ ಸಿಲುಕಿದ ಕಿವೀಸ್ ತಂಡ ಹೀನಾಯ ಸೋಲುಂಡಿದೆ.
ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಆಡುತ್ತಿರುವ ಯುಎಸ್ ತಂಡವು ಪಾಕಿಸ್ತಾನಕ್ಕೆ ಶಾಕ್ ನೀಡಿದ ಬೆನ್ನಲ್ಲೇ ಮತ್ತೊಂದು ಅಚ್ಚರಿಯ ಫಲಿತಾಂಶ ಮೂಡಿ ಬಂದಿದೆ. ಕೆನಡಾ ತಂಡವೂ ಕೂಡ ಐರ್ಲೆಂಡ್ ಸೋಲುಣಿಸಿದ್ದು, ವಿಶ್ವಕಪ್‌ನಲ್ಲಿ ರೋಚಕ ಫಲಿತಾಂಶಗಳು ಗಮನ ಸೆಳೆಯುತ್ತಿವೆ.
ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಬ್ಯಾಟಿಂಗ್ಗಿಳಿದ ಆಫ್ಘನ್ನರಿಗೆ ಗುರ್ಬಾಜ್ (80) ಹಾಗೂ ಇಬ್ರಾಹಿಂ ಝದ್ರನ್ (44) 103 ರನ್‌ಗಳ ಭರ್ಜರಿ ಆರಂಭ ಒದಗಿಸಿದರು. ಝದ್ರನ್ ವಿಕೆಟ್ ಪತನದ ಬಳಿಕ ಬಂದ ಅಜ್ಮತುಲ್ಲಾ 22 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಅಫ್ಘಾನಿಸ್ತಾನ ತಂಡ ನಿರಂತರ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು.
ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕೂಡ ಏಕಾಂಗಿ ಹೋರಾಟ ನಡೆಸಿದ ಗುರ್ಬಾಜ್ ಭರ್ಜರಿ 80 ರನ್ ಬಾರಿಸಿ ಕೊನೆಯವರಾಗಿ ಔಟಾದರು. ಈ ಮಧ್ಯೆ, ನಬಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ರಶಿದ್ ಖಾನ್ 6, ಕರಿಮ್ ಜನತ್ 1, ಗುಲ್ಬುದಿನ್ 0 ಹಾಗೂ ನಜಿಬುಲ್ಲಾ ಅಜೇಯ 1 ರನ್ ಗಳಿಸಿದರು. ಅಂತಿಮವಾಗಿ ಅಫ್ಘಾನಿಸ್ತಾನವು 20 ಓವರ್ಗಳಲ್ಲಿ 6 ವಿಕೆಟ್ಗೆ 159 ರನ್ ಪೇರಿಸಿತು.
160 ರನ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. ಆಘ್ಫನ್ ಬೌಲರ್ಗಳೆದುರು ಕಿವೀಸ್ ಬ್ಯಾಟರ್ಗಳು ರನ್ ಗಳಿಕೆಗೆ ತಿಣುಕಾಡಿದರು. ಫಿನ್ ಅಲೆನ್ 0, ಡೆವೊನ್ ಕಾನ್ವೆ 8, ನಾಯಕ ವಿಲಿಯಮ್ಸನ್ 9, ಡೆರ್ಲ್ ಮಿಚೆಲ್ 5 ಹಾಗೂ ಮಾರ್ಕ್ ಚಾಂಪ್ಮನ್ 4 ರನ್ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಗ್ಲೇನ್ ಫಿಲಿಪ್ಸ್ (18 ರನ್) ಹಾಗೂ ಮ್ಯಾಟ್ ಹೆನ್ರಿ (12 ರನ್) ಅವರು ಮಾತ್ರ ಎರಡಂಕಿ ಮೊತ್ತ ತಲುಪಿದರು.
ನಿರಾಸಾದಾಯಕ ಆಟ ತೋರಿದ ಕಿವೀಸ್ ತಂಡ ಕೇವಲ 75 ರನ್ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಅಫ್ಘಾನಿಸ್ತಾನ ಪರ ಫಾರೂಕಿ 17ಕ್ಕೆ 4, ರಶಿದ್ ಖಾನ್ 17ಕ್ಕೆ 4 ಹಾಗೂ ಮೊಹಮದ್ ನಬಿ 2 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: ಟಿ20 ವಿಶ್ವಕಪ್: ಸೂಪರ್ ಓವರ್ನಲ್ಲಿ ಯುಎಸ್ಗೆ ಐತಿಹಾಸಿಕ ಗೆಲುವು; ಪಾಕಿಸ್ತಾನಕ್ಕೆ ಮುಖಭಂಗ - USA Beats Pakistan