ಕೋಲಂಬೊ(ಶ್ರೀಲಂಕಾ): ಶ್ರೀಲಂಕಾ ವಿರುದ್ಧದ ಟಿ20 ಸರಣಿ ಗೆದ್ದ ನಂತರ ಭಾರತ ಇದೀಗ ಏಕದಿನ ಸರಣಿಯ ಮೇಲೆ ಕಣ್ಣಿಟ್ಟಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಇಂದು ಕೊಲಂಬೊದಲ್ಲಿ ನಡೆಯುತ್ತಿದ್ದು, ಭಾರತದ ಗೆಲುವಿಗೆ ಶ್ರೀಲಂಕಾ 231 ರನ್ ಟಾರ್ಗೆಟ್ ನೀಡಿದೆ.
ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಕುಲದೀಪ್ ಇಂದು ಕಣಕ್ಕಿಳಿದಿದ್ದಾರೆ. ಬಹಳ ದಿನಗಳ ನಂತರ ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್.ರಾಹುಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇನ್ನೊಂದೆಡೆ, ಗಾಯದ ಸಮಸ್ಯೆಯಿಂದಾಗಿ ಪ್ರಮುಖ ವೇಗಿ ಪತಿರಾನಾ ಶ್ರೀಲಂಕಾ ತಂಡದಲ್ಲಿ ಆಡುತ್ತಿಲ್ಲ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಆರಂಭಿಕರಾಗಿ ಪಾತುಮ್ ನಿಸ್ಸಾಂಕ ಮತ್ತು ಅವಿಷ್ಕಾ ಫೆರ್ನಾಂಡೋ ಕಣಕ್ಕಿಳಿದಿದ್ದರು. ಮೂರನೇ ಓವರ್ನಲ್ಲಿ ಸಿರಾಜ್ ಬೌಲಿಂಗ್ನಲ್ಲಿ 1 ರನ್ ಗಳಿಸಿದ್ದ ಫೆರ್ನಾಂಡೋ ಕ್ಯಾಚಿತ್ತು ನಿರ್ಗಮಿಸಿದರು. ಒಂದೆಡೆ ವಿಕೆಟ್ ಉರುಳುತ್ತಿದ್ದಂತೆ ನಿಸ್ಸಾಂಕ ಕ್ರೀಸ್ ಕಚ್ಚಿಕೊಂಡು ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದರು.
ಅರ್ಧ ಶತಕ ಗಳಿಸಿದ ನಿಸ್ಸಾಂಕ (56 ರನ್) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೇ ಸುಂದರ್ಗೆ ವಿಕೆಟ್ನೀಡಿ ಪೆವಿಲಿಯನ್ ಹಾದಿ ಹಿಡಿದರು. ನಿಸ್ಸಾಂಕ ಔಟಾದ ಬಳಿಕ ಕಣಕ್ಕಿಳಿದ ದುನಿತ್ ವೆಲಾಲಗೆ ಭಾರತದ ಬೌಲರ್ಗಳನ್ನು ಕಾಡಿದರು. 65 ಎಸೆತಗಳಲ್ಲಿ 67 ರನ್ ಕಲೆ ಹಾಕಿ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮವಾಗಿ ತಂಡ ನಿಗದಿತ 50 ಓವರ್ಗಳಿಗೆ 8 ವಿಕೆಟ್ಕಳೆದುಕೊಂಡ 230 ರನ್ ಕಲೆ ಹಾಕಿತು.
ಲಂಕಾ ಪರ ಪಾತುಮ್ ನಿಸ್ಸಾಂಕ 56, ಅವಿಷ್ಕಾ ಫೆರ್ನಾಂಡೋ 1, ಕುಸಲ್ ಮೆಂಡಿಸ್ 14, ಸದಿರ ಸಮರವಿಕ್ರಮ 8, ನಾಯಕ ಚರಿತ್ ಅಸಲಂಕಾ 14, ಜನಿತ್ ಲಿಯಾನಗೆ 20, ವನಿಂದು ಹಸರಂಗಾ 24, ಅಕಿಲಾ ಧನಂಜಯ್ 17, ದುನಿತ್ ವೆಲಾಲಗೆ ಔಟಾಗದೇ 67 ರನ್ ಪೇರಿಸಿದರು.
ಭಾರತ ಪರ ಅರ್ಷ್‌ದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಶಿವಂ ದುಬೆ ಮತ್ತು ಕುಲ್ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.