ಚೆನ್ನೈ(ತಮಿಳುನಾಡು): ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಈ ಸಲ ಐಪಿಎಲ್‌ನಲ್ಲಿ ತಮ್ಮ ಬ್ಯಾಟ್‌ನಿಂದ ಮಿಂಚು ಹರಿಸುತ್ತಾರಾ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ಮಾಹಿ ನಿವೃತ್ತಿ ಸುದ್ದಿ ಬಲವಾಗಿ ಕೇಳಿ ಬರುತ್ತಿದೆ. ಆದರೆ ಅದೊಂದು ಸುಳ್ಳು ಸುದ್ದಿ ಎಂಬುದೀಗ ಸ್ಪಷ್ಟ.
ಐಪಿಎಲ್ ಸೀಸನ್‌ನಲ್ಲಿ ಭಾಗವಹಿಸುವ ಬಗ್ಗೆ ಧೋನಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಕುತೂಹಲಕಾರಿ ಪೋಸ್ಟ್ವೊಂದನ್ನು ಹರಿಯಬಿಟ್ಟಿದ್ದಾರೆ. 'ಹೊಸ ಸೀಸನ್ ಮತ್ತು ಹೊಸ ಪಾತ್ರಕ್ಕಾಗಿ ಕಾಯಲು ಸಾಧ್ಯವಾಗುತ್ತಿಲ್ಲ, ಸ್ಟೇ ಟ್ಯೂನ್ಡ್' ಎಂದು ಅವರು ಬರೆದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮ್ಯಾನೇಜ್‌ಮೆಂಟ್ ಕೂಡ ಎಕ್ಸ್ ಪೋಸ್ಟ್ ಮಾಡಿ ಸಸ್ಪೆನ್ಸ್ ಹೆಚ್ಚಿಸಿದೆ. ಹೊಸ ಪಾತ್ರದಲ್ಲಿ, ಇದನ್ನು ಲಿಯೋ ಎಂದು ಬರೆಯಲಾಗಿದೆ. ಹೀಗಾಗಿ ಧೋನಿ ಹಾಗೂ ಸಿಎಸ್‌ಕೆ ಮಾಡಿರುವ ಪೋಸ್ಟ್ಗಳು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿವೆ. ನಾಯಕತ್ವದ ಜವಾಬ್ದಾರಿಯನ್ನು ಧೋನಿ ತೊರೆಯಲಿದ್ದಾರಾ?, ಹೊಸ ಸೀಸನ್‌ನಲ್ಲಿ ಧೋನಿ ಹೊಸ ಪಾತ್ರವೇನು? ಎಂಬೆಲ್ಲದರ ಬಗ್ಗೆ ಅಭಿಮಾನಿಗಳಲ್ಲಿ ಚರ್ಚೆ ಶುರುವಾಗಿದೆ. ಅಷ್ಟೇ ಅಲ್ಲ, ಬ್ಯಾಟರ್ ಮತ್ತು ಕ್ಯಾಪ್ಟನ್ ಜವಾಬ್ದಾರಿಗೆ ನಿವೃತ್ತಿ ಘೋಷಿಸಿ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರಾ? ಎಂಬ ಅನುಮಾನವನ್ನೂ ಹಲವು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಮಾಹಿ ಮಾರ್ಗದರ್ಶಕರಾಗಿ ಕೆಲಸ ಮಾಡಲಿದ್ದಾರೆ ಎಂದಿದ್ದಾರೆ. ಆದರೆ, ನಿವೃತ್ತಿ ಘೋಷಿಸದಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.
ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇದುವರೆಗೆ 5 ಬಾರಿ ಟ್ರೋಫಿಗೆ ಮುತ್ತಿಕ್ಕಿದೆ. ಕಳೆದ ಋತುವಿನಲ್ಲಿಯೂ ಸಿಎಸ್‌ಕೆ ಪ್ರಶಸ್ತಿ ಗೆದ್ದಿತ್ತು. ಇದಾದ ಬಳಿಕ ಅವರು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇತ್ತೀಚೆಗೆ ಈ ಸೀಸನ್‌ಗಾಗಿ ಅಭ್ಯಾಸ ಆರಂಭಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರೊಂದಿಗೆ 2024ರ ಸೀಸನ್‌ನಲ್ಲಿ ಆಡುತ್ತಾರೆ ಎಂದು ಹಲವರು ಭಾವಿಸಿದ್ದರು. ಇದೇ ಸಮಯದಲ್ಲಿ ಇತ್ತೀಚಿನ ಪೋಸ್ಟ್ ಕ್ರಿಕೆಟ್ ವಲಯದಲ್ಲಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಮಾಸ್ಕೊ ವುಶು ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಕಾಶ್ಮೀರದ ಅವಳಿ ಸಹೋದರಿಯರು