ಆಂಟಿಗುವಾ: ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 3 ವಿಕೆಟ್ಗಳಿಂದ ಮಣಿಸಿದ ದಕ್ಷಿಣ ಆಫ್ರಿಕಾವು ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ತಲುಪಿದೆ. ತವರಿನ ಪ್ರೇಕ್ಷಕರ ಎದುರಲ್ಲೇ ಸೋಲು ಕಂಡ ಕೆರಿಬಿಯನ್ನರು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಎಡನ್ ಮಾರ್ಕ್ರಮ್, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ವೆಸ್ಟ್ ಇಂಡೀಸ್, ಆರಂಭದಲ್ಲೇ 5 ರನ್ಗೆ 2 ವಿಕೆಟ್ ಕಳೆದುಕೊಂಡಿತು. ಆರಂಭಿಕ ಶೈ ಹೋಪ್ 0 ಹಾಗೂ ನಿಕೋಲಸ್ ಪೂರನ್ 1 ರನ್ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಒಂದಾದ ರೋಸ್ಟನ್ ಚೇಸ್ ಅರ್ಧಶತಕ (52) ಹಾಗೂ ಮೇಯರ್ಸ್ (35) ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
ಆದರೆ, ಮೇಯರ್ಸ್ ಔಟಾಗುತ್ತಿದ್ದಂತೆ ವಿಂಡೀಸ್ ಮತ್ತೆ ಕುಸಿತದ ಹಾದಿ ಹಿಡಿಯಿತು. ಬಳಿಕ ಬಂದ ನಾಯಕ ರೋವ್ಮನ್ ಪೊವೆಲ್ 1 ರನ್ಗೆ ಔಟಾದರೆ, ಶೆರ್ಫನ್ ರುದರ್ಫೋರ್ಡ್ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು. ಇದರ ಬೆನ್ನಲ್ಲೇ, ಅರ್ಧಶತಕ ಬಾರಿಸಿದ ಚೇಸ್ ಕೂಡ ಔಟಾಗಿದ್ದರಿಂದ ವಿಂಡೀಸ್ 97 ರನ್ಗೆ 6 ವಿಕೆಟ್ ಕಳೆದುಕೊಂಡಿತು. ಬಳಿಕ ಅಂಡ್ರೆ ರಸೆಲ್ 15, ಅಲ್ಜಾರಿ ಜೋಸೆಫ್ ಅವರ 11 ರನ್ ಕಾಣಿಕೆಯಿಂದ ಕೆರಿಬಿಯನ್ನರು 20 ಓವರ್ಗಳಲ್ಲಿ 8 ವಿಕೆಟ್ಗೆ 135 ರನ್ ಪೇರಿಸಿದರು. ಹರಿಣಗಳ ಪರ ತಬ್ರೈಜ್ ಶಮ್ಸಿ 27 ರನ್ಗೆ 3 ವಿಕೆಟ್ ಪಡೆದು ತಂಡಕ್ಕೆ ಮೇಲುಗೈ ಒದಗಿಸಿದರು.
ದಕ್ಷಿಣ ಆಫ್ರಿಕಾ ಚೇಸಿಂಗ್: 136 ರನ್ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೂಡ ಕಳಪೆ ಆರಂಭ ಪಡೆಯಿತು. ತಂಡದ ಮೊತ್ತ 15 ರನ್ ಆಗುವಷ್ಟರಲ್ಲೇ ಆರಂಭಿಕರಾದ ರೀಜಾ ಹೆನ್ರಿಕ್ಸ್ (0) ಹಾಗೂ ಕ್ವಿಂಟನ್ ಡಿ ಕಾಕ್ (12) ವಿಕೆಟ್ ಒಪ್ಪಿಸಿದ್ದರು. ಈ ವೇಳೆ, ವರುಣನ ಆಗಮನದಿಂದಾಗಿ ಆಟ ನಿಂತಿತು. ಹೆಚ್ಚು ಹೊತ್ತು ಮಳೆ ಮುಂದುವರೆದ ಪರಿಣಾಮ ಇನ್ನಿಂಗ್ಸ್ನ್ನು 17 ಓವರ್ಗಳಿಗೆ ಸೀಮಿತಗೊಳಿಸಿ, ದಕ್ಷಿಣ ಆಫ್ರಿಕಾಗೆ 123 ರನ್ ಟಾರ್ಗೆಟ್ ನೀಡಲಾಯಿತು.
ಮರಳಿ ಕ್ರೀಸ್ಗಿಳಿದ ಹರಿಣಗಳ ಬ್ಯಾಟರ್ಗಳು ಸುಲಭವಾಗಿ ರನ್ ಕಲೆಹಾಕಲು ತೊಡಗಿದರು. ಆದರೂ ದಕ್ಷಿಣ ಆಫ್ರಿಕಾ ನಿರಂತರ ವಿಕೆಟ್ ಕಳೆದುಕೊಳ್ಳುತ್ತ ಸಾಗಿದ್ದರಿಂದ ಪಂದ್ಯವು ರೋಚಕವಾಗಿ ಸಾಗಿತು. ಎಡನ್ ಮಾರ್ಕ್ರಮ್ (18), ಹೆನ್ರಿಚ್ ಕ್ಲಾಸಿನ್ (22) ಹಾಗೂ ಟ್ರಿಸ್ಟನ್ ಸ್ಟಬ್ಸ್ (29) ಉಪಯುಕ್ತ ಆಟವಾಡಿದರೂ ಕೂಡ, ದೊಡ್ಡ ಹೊಡೆತಗಳಿಗೆ ಯತ್ನಿಸಿ ವಿಕೆಟ್ ಒಪ್ಪಿಸಿದರು. ಈ ನಡುವೆ ಡೆವಿಡ್ ಮಿಲ್ಲರ್ 4 ಹಾಗೂ ಕೇಶವ್ ಮಹಾರಾಜ್ 2 ರನ್ಗಳಿಗೆ ಔಟಾಗಿದ್ದರಿಂದ ಪಂದ್ಯವು ಆಸಕ್ತಿ ಹೆಚ್ಚಿಸಿತು. ಈ ಹಂತದಲ್ಲಿ ಮಾರ್ಕೋ ಜಾನ್ಸನ್ ಹಾಗೂ ರಬಾಡ ಸಮಯೋಚಿತ ಆಟ ತೋರಿದರು.
ಅಂತಿಮ ಎರಡು ಓವರ್ಗಳಲ್ಲಿ ಗೆಲುವಿಗೆ 13 ರನ್ ಆಗತ್ಯವಿತ್ತು. 16ನೇ ಓವರ್ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದ ರಬಾಡ, ತಂಡವನ್ನು ಗೆಲುವಿನಂಚಿಗೆ ತಂದರು. ಒಬೆಡ್ ಮೆಕಾಯ್ ಅವರ 17ನೇ ಓವರ್ನ ಮೊದಲ ಬಾಲ್ನಲ್ಲಿ ಮಾರ್ಕೋ ಜಾನ್ಸನ್ ಸಿಕ್ಸರ್ ಸಿಡಿಸುತ್ತಿದ್ದಂತೆ, ದಕ್ಷಿಣ ಆಫ್ರಿಕಾವು ಗೆಲುವಿನ ನಗೆ ಬೀರಿತು. ಇದರೊಂದಿಗೆ ಹರಿಣಗಳು ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಿದ್ದು, ವೆಸ್ಟ್ ಇಂಡೀಸ್ ಟೂರ್ನಿಯಿಂದ ಹೊರಬಿದ್ದಿದೆ.
ಅಲ್ಲದೆ, ಈ ಟೂರ್ನಿಯಲ್ಲಿ ಸತತ ಏಳು ಪಂದ್ಯಗಳನ್ನು ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾವು ಟೂರ್ನಿಯಲ್ಲಿ ಅತಿಹೆಚ್ಚು ಗೆಲುವು ಕಂಡ ಸಾಧನೆಗೆ ಪಾತ್ರವಾಗಿದೆ. ಈ ಹಿಂದೆ 2009ರಲ್ಲಿ ಶ್ರೀಲಂಕಾವು 9 ಪಂದ್ಯಗಳನ್ನು ಜಯಿಸಿರುವುದು ದಾಖಲೆಯಾಗಿತ್ತು.
ಇದನ್ನೂ ಓದಿ: ಇಂದು ಭಾರತ vs ಆಸ್ಟ್ರೇಲಿಯಾ: ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ? - India vs Australia