ಮುಂಬೈ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಆಡಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಟೀಂ ಇಂಡಿಯಾದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಹೇಳಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಈ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಭರವಸೆಯನ್ನು ಅವರು ಹೊಂದಿದ್ದಾರೆ.
ಇತ್ತೀಚೆಗೆ ಮುಕ್ತಾಯವಾದ ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಶಾರ್ದೂಲ್ ಠಾಕೂರ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಫೈನಲ್ ಪಂದ್ಯದಲ್ಲಿ ವಿದರ್ಭ ತಂಡದ ವಿರುದ್ಧ ಗೆದ್ದು ಮುಂಬೈ ತನ್ನ 42ನೇ ರಣಜಿ ಟ್ರೋಫಿಗೆ ಮುತ್ತಿಕ್ಕಿದೆ. ಐಪಿಎಲ್ನಲ್ಲಿ ಶಾರ್ದೂಲ್ 2018ರಿಂದ 2021ರವರೆಗೆ ಸಿಎಸ್‌ಕೆ ತಂಡದ ಭಾಗವಾಗಿದ್ದರು. ನಂತರ ಅವರು 2022ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು 2023ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗಿದ್ದರು. ಈ ಆವೃತ್ತಿಯಲ್ಲಿ ಶಾರ್ದೂಲ್ ಮತ್ತೆ ಸಿಎಸ್‌ಕೆಗೆ ಮರಳಿದ್ದು, ಅವರನ್ನು 4 ಕೋಟಿ ರೂ.ಗೆ ಖರೀದಿ ಮಾಡಲಾಗಿದೆ.
ಮುಂಬೈ ತಂಡ ರಣಜಿ ಟ್ರೋಫಿಯನ್ನು ಗೆದ್ದ ನಂತರ ಐಪಿಎಲ್ ಟೂರ್ನಿ ಕುರಿತು ಮಾತನಾಡಿರುವ ಶಾರ್ದೂಲ್, ನಿಜ ಹೇಳಬೇಕೆಂದರೆ ಕಳೆದ ಐಪಿಎಲ್ ನನಗೆ ಅಷ್ಟೊಂದು ಒಳ್ಳೆಯದಾಗಿರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಆಲ್‌ರೌಂಡರ್ ಠಾಕೂರ್ 11 ಪಂದ್ಯಗಳಲ್ಲಿ ಕೇವಲ ಏಳು ವಿಕೆಟ್ಗಳನ್ನು ಪಡೆದಿದ್ದರು. ಬ್ಯಾಟಿಂಗ್ನಲ್ಲಿ 14.13ರ ಸರಾಸರಿಯಲ್ಲಿ ರನ್ ಗಳಿಸಿದ್ದರು.
ಇದೀಗ ಈ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿರುವ ಶಾರ್ದೂಲ್, ''ಮಹಿ ಭಾಯಿ ನಾಯಕತ್ವದಲ್ಲಿ ಆಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ನೀವು ಅವರೊಂದಿಗೆ ಆಡಿದಾಗ ನೀವು ಖಂಡಿತವಾಗಿಯೂ ಪ್ರತಿ ಪಂದ್ಯದಿಂದ ಏನನ್ನಾದರೂ ಕಲಿಯಲು ಸಾಧ್ಯ. ಧೋನಿ ಸ್ಟಂಪ್‌ನ ಹಿಂದೆ ನಿಂತು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಅದು ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಎಂದು ತಿಳಿಸಿದ್ದಾರೆ.
ಅಲ್ಲದೇ, ಧೋನಿ ಅವರ ಅತ್ಯುತ್ತಮ ಗುಣವೆಂದರೆ, ಅವರು ಆಟಗಾರನ ಪ್ರದರ್ಶನವನ್ನೂ ಶೈನ್ ಆಗುವಂತೆ ಮಾಡುತ್ತಾರೆ. ಇದೊಂದು ಅದ್ಭುತ ವಿಷಯ ಎಂದು ನಾನು ಭಾವಿಸುತ್ತೇನೆ. ಅಲ್ಲದೇ, ಅವರು ಆಟಗಾರರಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುತ್ತಾರೆ. ಸ್ವಂತ ಪ್ರದರ್ಶನದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅವಕಾಶ ನೀಡುತ್ತಾರೆ. ಅದಕ್ಕಾಗಿಯೇ ನಾನು ಮತ್ತೆ ಸಿಎಸ್‌ಕೆಗೆ ಮರಳಲು ತುಂಬಾ ಉತ್ಸುಕನಾಗಿದ್ದೇನೆ ಎಂದು ಶಾರ್ದೂಲ್ ವಿವರಿಸಿದ್ದಾರೆ. ಈ ಆವೃತ್ತಿಯಲ್ಲಿ ಠಾಕೂರ್ ಅವರೊಂದಿಗೆ ಯುವ ಕ್ರಿಕೆಟಿಗರಾದ ಸಮೀರ್ ರಿಜ್ವಿ, ಡೇರಿಲ್ ಮಿಚೆಲ್ ಮತ್ತು ರಚಿನ್ ರವೀಂದ್ರ ಸಹ ಸಿಎಸ್‌ಕೆ ತಂಡವನ್ನು ಸೇರಿಕೊಂಡಿದ್ದಾರೆ.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಚಂದ್ರ ಗ್ರಹದಿಂದ ಇಳಿದು ಬಂದಿದ್ದಾರಾ?: ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಗರಂ