ನವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಮತ್ತು ಭಾರತದ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ವಿಚ್ಛೇದನ ಪಡೆದಿರುವುದು ಅಧಿಕೃತವಾಗಿದೆ. ನಟಿ ಸನಾ ಜಾವೇದ್ ಅವರೊಂದಿಗೆ ಮಲಿಕ್ ವಿವಾಹವಾದ ಒಂದು ದಿನದ ಬಳಿಕ ಸಾನಿಯಾ ಕುಟುಂಬ ಇದನ್ನು ಖಚಿತಪಡಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಮಿರ್ಜಾ ಕುಟುಂಬಸ್ಥರು, ಸಾನಿಯಾ ತನ್ನ ವೈಯಕ್ತಿಕ ಜೀವನವನ್ನು ಗೌಪ್ಯವಾಗಿ ಕಾಪಾಡಿಕೊಂಡು ಬಂದಿದ್ದರು. ಆದರೆ, ಅದನ್ನೀಗ ಬಹಿರಂಗ ಮಾಡುವ ಕಾಲ ಬಂದಿದೆ. ಶೋಯೆಬ್ ಮಲಿಕ್ ಅವರ ಜೊತೆಗಿನ ವೈವಾಹಿಕ ಬಂಧವನ್ನು ಕೆಲವು ತಿಂಗಳುಗಳ ಹಿಂದೆಯೇ ಅಂತ್ಯಗೊಳಿಸಿದ್ದರು. ಪಾಕ್ ಕ್ರಿಕೆಟಿಗನ ಹೊಸ ಜೀವನಕ್ಕೆ ಸಾನಿಯಾ ಶುಭ ಹಾರೈಸುತ್ತಾರೆ ಎಂದು ಹೇಳಿದ್ದಾರೆ.
ಇದು ಸಾನಿಯಾ ಜೀವನದ ಅತಿ ಸೂಕ್ಷ್ಮ ಘಟ್ಟವಾಗಿದೆ. ಹಾಗಾಗಿ ಎಲ್ಲ ಅಭಿಮಾನಿಗಳು ಮತ್ತು ಹಿತೈಷಿಗಳು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ, ಅವರ ವೈಯಕ್ತಿಕ ಜೀವನವನ್ನು ಗೌರವಿಸುವಂತೆ ವಿನಂತಿಸುತ್ತೇವೆ ಎಂದಿದ್ದಾರೆ.
ನಿನ್ನೆಯಷ್ಟೇ ವಿವಾಹವಾಗಿದ್ದ ಮಲಿಕ್: ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಜನವರಿ 20 ರಂದು ನಟಿ ಸನಾ ಜಾವೇದ್ ಅವರ ಜೊತೆಗೆ ನಿಖಾ ಮಾಡಿಕೊಂಡಿದ್ದರು. ಇದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಭಾರತ ಮತ್ತು ಪಾಕ್ ಕ್ರೀಡಾ ಜೋಡಿಯ ವಿವಾಹ ವಿಚ್ಛೇದನ ಪಡೆದಿದ್ದು ಎಲ್ಲೂ ಬಹಿರಂಗವಾಗಿರಲಿಲ್ಲ. ಹೀಗಾಗಿ ಇದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಉಂಟು ಮಾಡಿತ್ತು. ಇದರ ಬೆನ್ನಲ್ಲೇ ಸಾನಿಯಾ ಮಿರ್ಜಾ ಕುಟುಂಬಸ್ಥರು ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
2010 ರಲ್ಲಿ ಮಲಿಕ್ರನ್ನು ಸಾನಿಯಾ ಮಿರ್ಜಾ ವರಿಸಿದ್ದರು. ಇದಾದ ಬಳಿಕ 2022 ರಲ್ಲಿ ಇಬ್ಬರ ನಡುವಿನ ಸಂಬಂಧ ಹಳಸಿದ ಬಗ್ಗೆ ವದಂತಿಗಳು ಹರಿದಾಡುತ್ತಿದ್ದವು. ಹೈದರಾಬಾದ್ನಲ್ಲಿ ಪುತ್ರನ ಜೊತೆಗೆ ಸಾನಿಯಾ ನೆಲೆಸಿದ್ದರೆ, ಶೋಯೆಬ್ ಪಾಕಿಸ್ತಾನದಲ್ಲಿದ್ದರು. ಹೀಗಾಗಿ ಇಬ್ಬರೂ ದಾಂಪತ್ಯ ಜೀವನವನ್ನು ಕಡಿದುಕೊಂಡಿದ್ದಾರೆ ಎಂದು ಸುದ್ದಿ ಹರಿದಾಡುತ್ತಿತ್ತು.
ಚರ್ಚೆಗೀಡು ಮಾಡಿದ್ದ ಮಿರ್ಜಾ ಪೋಸ್ಟ್: ಇನ್ನು ಕೆಲ ದಿನಗಳ ಹಿಂದೆ ಮಾಜಿ ಟೆನಿಸ್ ತಾರೆ ಸಾನಿಯಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಭಾರೀ ಕುತೂಹಲ ಮತ್ತು ಚರ್ಚೆಗೀಡು ಮಾಡಿತ್ತು. 'ಮದುವೆ ಕಷ್ಟ. ವಿಚ್ಛೇದನವು ಅಷ್ಟೇ ಕಷ್ಟಕರವಾಗಿತ್ತು. ನಿಮಗೆ ಬೇಕಾದುದನ್ನು ಬುದ್ಧಿವಂತಿಕೆಯಿಂದ ಯೋಚಿಸಬೇಕು,' ಎಂದು ಬರೆದುಕೊಂಡಿದ್ದರು.
ಭಾರತದ ಶ್ರೇಷ್ಠ ಟೆನಿಸ್ ಆಟಗಾರ್ತಿಯರಲ್ಲಿ ಒಬ್ಬರಾಗಿರುವ ಸಾನಿಯಾ 2 ದಶಕಗಳ ಕಾಲದ ವೃತ್ತಿಜೀವನದ ಉತ್ತುಂಗದಲ್ಲಿದ್ದರು. ಕಳೆದ ವರ್ಷ 2023 ರಲ್ಲಿ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಘೋಷಿಸಿದ್ದರು. ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಸ್ಪರ್ಧೆಗಳಲ್ಲಿ 6 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗನಿಗೆ ಎರಡನೇ ವಿವಾಹ; ನಟಿಯನ್ನು ವರಿಸಿದ ಶೋಯೆಬ್ ಮಲಿಕ್