ಗ್ರೋಸ್ ಐಲೆಟ್ (ಸೇಂಟ್ ಲೂಸಿಯಾ): ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ತಮ್ಮ ಸಹ ಆಟಗಾರ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಟಿ20ಐ ಮಾದರಿಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಟಿ20ಐ ಮಾದರಿಯಲ್ಲಿ ನಾಯಕನಾಗಿ ಅತಿ ಹೆಚ್ಚು ಗೆಲುವು ಸಾಧಿಸಿದ ಪಾಕಿಸ್ತಾನದ ನಾಯಕ ಬಾಬರ್ ಆಜಮ್ ಅವರ ದಾಖಲೆಯನ್ನು ಶರ್ಮಾ ಸಮಗೊಳಿಸಿದ್ದಾರೆ.
ನಿನ್ನೆ (ಸೋಮವಾರ) ನಡೆದ ಮ್ಯಾಚ್ನಲ್ಲಿ ನಾಯಕ ರೋಹಿತ್ ಶರ್ಮಾ ಭಾರತಕ್ಕೆ ಗೆಲುವಿನ ಅಡಿಪಾಯ ಹಾಕಿದರು. ಆಸ್ಟ್ರೇಲಿಯದ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಅವರು ಕೇವಲ 19 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಅವರು 41 ಎಸೆತಗಳಲ್ಲಿ 92 ರನ್‌ಗಳ ಅದ್ಭುತ ಇನ್ನಿಂಗ್ಸ್ ಅನ್ನು ಆಡಿದರು ಮತ್ತು 205 ರನ್‌ಗಳ ಸ್ಕೋರ್ ತಲುಪುವಲ್ಲಿ ಪ್ರಮುಖ ಕೊಡುಗೆ ನೀಡಿದರು.
ರೋಹಿತ್ ಶರ್ಮಾಗೆ ಅಗ್ರಸ್ಥಾನ: ಅಭಿಮಾನಿಗಳು ಹಿಟ್‌ಮ್ಯಾನ್ ಶರ್ಮಾ ಅವರ ಬ್ಯಾಟಿಂಗ್ ಅಬ್ಬರದ ಅತ್ಯುತ್ತಮ ಕ್ಷಣಗಳನ್ನು ಕಣ್ತುಂಬಿಕೊಂಡರು. 157 ಪಂದ್ಯಗಳಲ್ಲಿ, ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ 32.03 ಸರಾಸರಿ ಮತ್ತು 140.75 ಸ್ಟ್ರೈಕ್ ರೇಟ್‌ನಲ್ಲಿ 4,165 ರನ್ ಗಳಿಸಿದ್ದಾರೆ.
ಈ ಮೂಲಕ ರೋಹಿತ್ ಶರ್ಮಾ ಅವರು ಅಗ್ರಸ್ಥಾನಕ್ಕೆ ಏರಿದರು. ಬಾಬರ್ 123 ಪಂದ್ಯಗಳಲ್ಲಿ 41.03 ಸರಾಸರಿಯಲ್ಲಿ 4,145 ರನ್ ಗಳಿಸಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಕೊಹ್ಲಿ 123 ಪಂದ್ಯಗಳಲ್ಲಿ 48.84 ಸರಾಸರಿಯಲ್ಲಿ 4,103 ರನ್ ಗಳಿಸಿ ಮೂರನೇ ಸ್ಥಾನಕ್ಕೆ ಕುಸಿದರು.
ರೋಹಿತ್ ನಾಯಕತ್ವದಲ್ಲಿ 48 ಟಿ20ಐ ಪಂದ್ಯಗಳ ಗೆಲುವು: ಸೂಪರ್-8 ರ ಕೊನೆಯ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾವನ್ನು 24 ರನ್‌ಗಳ ಅಂತರದಿಂದ ಮಣಿಸಿದೆ. ಭಾರತವು ಆಸ್ಟ್ರೇಲಿಯಾ 205 ರನ್‌ಗಳನ್ನು ಟಾರ್ಗೆಟ್ ನೀಡಿದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಒಟ್ಟು 60 ಪಂದ್ಯಗಳ ಪೈಕಿ ರೋಹಿತ್ ನಾಯಕತ್ವದಲ್ಲಿ ಭಾರತ ತಂಡವು 48 ಟಿ20ಐ ಪಂದ್ಯಗಳನ್ನು ಗೆಲುವು ದಾಖಲಿಸಿದೆ. T20I ಮಾದರಿಯ 85 ಪಂದ್ಯಗಳಲ್ಲಿ ಬಾಬರ್ ಅವರ ನಾಯಕತ್ವದಲ್ಲಿ ಪಾಕಿಸ್ತಾನವು 48 ಗೆಲುವುಗಳನ್ನು ತನ್ನದಾಗಿಸಿಕೊಂಡಿದೆ.
ಜಯ್ ಶಾ ಅಭಿನಂದನೆ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ಜಯ್ ಶಾ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ, ರೋಹಿತ್ ಅವರ ಅದ್ಭುತ ಪ್ರದರ್ಶನಕ್ಕಾಗಿ ಅಭಿನಂದಿಸಿದ್ದಾರೆ ಮತ್ತು ಭಾರತ ವಿಶ್ವಕಪ್ ಟ್ರೋಫಿಯನ್ನು ದೇಶಕ್ಕೆ ಮರಳಿ ತರಲಿದೆ ಎಂಬ ಆಶಾದಾಯಕರಾಗಿದ್ದಾರೆ.
"ಇದು ಹಿಟ್‌ಮ್ಯಾನ್ ಶೋ! ನೀವು ಬ್ಯಾಟ್‌ನಲ್ಲಿ ಸರಳವಾಗಿ ಅದ್ಭುತವಾಗಿದ್ದೀರಿ, ನಾವು ಸೆಮಿಸ್‌ಗೆ ಹೋಗುತ್ತಿರುವಾಗ ನಮ್ಮ ಅಜೇಯ ಓಟ ಮುಂದುವರಿಯುತ್ತದೆ! ಈ ಟ್ರೋಫಿಯನ್ನು ಮನೆಗೆ ತರೋಣ, ಹುಡುಗರೇ!" ಎಂದು ಶಾ ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು "ಬ್ಲಾಸ್ಟಿಂಗ್ ಪ್ರದರ್ಶನಕ್ಕಾಗಿ" ಮೆನ್ ಇನ್ ಬ್ಲೂ ಅವರನ್ನು ಶ್ಲಾಘಿಸಿದ್ದಾರೆ.