ನವದೆಹಲಿ: ಭಾರತ ತಂದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಭೀಕರ ಕಾರು ಅಪಘಾತದಲ್ಲಿ ಬದುಕುಳಿದಿದ್ದೇ ಪವಾಡ. ಸಾವಿನ ಅಂಚಿಗೆ ತೆರಳಿ ಬದುಕುಳಿದಿದ್ದ ಕ್ರಿಕೆಟಿಗ, ಒಂದೂವರೆ ವರ್ಷ ಕ್ರಿಕೆಟ್ನಿಂದ ದೂರ ಉಳಿದಿದ್ದರು. ದುರಂತದಲ್ಲಾದ ದೈಹಿಕ ಗಾಯ ಮತ್ತು ಮಾನಸಿಕ ಆಘಾತದಿಂದ ಅವರು ಮತ್ತೆ ಕ್ರಿಕೆಟ್‌ಗೆ ಮರಳುತ್ತಾರೆ ಎಂಬುದೇ ಅನುಮಾನವಾಗಿತ್ತು.
26ರ ಪ್ರಾಯದ ಪಂತ್ ಚಿಕಿತ್ಸೆಗೆ ಒಳಗಾಗಿ ಮತ್ತೆ ಪುಟಿದೆದ್ದಿದ್ದಾರೆ. ಐಪಿಎಲ್ ಮೂಲಕ ಅವರು ವೃತ್ತಿಪರ ಕ್ರಿಕೆಟ್‌ಗೆ ಕಮ್ಬ್ಯಾಕ್ ಮಾಡಿದ್ದಾರೆ. ಇದೀಗ ಅವರು 2024 ರ ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದಾರೆ. ಐಪಿಎಲ್ನಲ್ಲಿ ಅವರು ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿ ಸೈ ಎನಿಸಿಕೊಂಡರು.
ಇದೀಗ, ಅವರು ತಾವು ಅಪಘಾತಕ್ಕೆ ಅನುಭವಿಸಿದ ನೋವು, ಕ್ರಿಕೆಟ್‌ಗೆ ಮರಳುತ್ತೇನೆ ಎಂಬ ಆಶಾಭಾವನೆ ಕುರಿತು, ಕ್ರಿಕೆಟಿಗ ಶಿಖರ್ ಧವನ್ ಅವರು ನಡೆಸಿಕೊಡುವ ಧವನ್ ಕರೆಂಗೆ ಟಾಕ್ ಶೋದಲ್ಲಿ ಮಾತನಾಡಿದ್ದಾರೆ. "ಮೊಣಕಾಲಿನ ಗಾಯ, ಮೂಳೆ ಮುರಿತವು ತನ್ನನ್ನು ತೀವ್ರವಾಗಿ ಬಾಧಿಸಿತು. ಗಾಯಗಳು ಅವರ ವೃತ್ತಿಜೀವನಕ್ಕೆ ಗಂಭೀರ ಪರಿಣಾಮ ಬೀರುತ್ತವೆ ಎಂದು ಭಾವಿಸಿದ್ದೆ. 15 ತಿಂಗಳ ಪುನರ್ವಸತಿ ನಂತರ ಐಪಿಎಲ್ ಮೂಲಕ ನಾನು ಕ್ರಿಕೆಟ್‌ಗೆ ಮರಳಿದೆ" ಎಂದಿದ್ದಾರೆ.
"ಗಾಯದಿಂದ ಚೇತರಿಸಿಕೊಳ್ಳುವಾಗ ಆತ್ಮವಿಶ್ವಾಸವು ತುಂಬಾ ಮುಖ್ಯವಾಗಿರುತ್ತದೆ. ಕಾರಣ ನಮ್ಮ ಸುತ್ತಲಿನ ಜನರು ವಿಭಿನ್ನವಾಗಿ ಮಾತನಾಡುತ್ತಿರುತ್ತಾರೆ. ನಿಮಗೆ ಯಾವುದು ಒಳ್ಳೆಯದು ಎಂಬುದರ ಕಡೆಗೆ ಗಮ್ಯ ಇರಬೇಕು. ಆಗ ಮಾತ್ರ ನೀವು ಎಂಥದ್ದೇ ಸಂಕಷ್ಟದಿಂದ ಪಾರಾಗಿ ಬರಲು ಸಾಧ್ಯ ಎಂದಿದ್ದಾರೆ.
"ಅಪಘಾತವಾದ ಬಳಿಕ ನಾನು ಬದುಕುಳಿದಿದ್ದೇನೆಯೇ ಅಥವಾ ಇಲ್ಲವೇ ಎಂಬುದು ಖಚಿತವಾಗಿರಲಿಲ್ಲ. ಆದರೆ, ದೇವರು ನನಗೆ ಎರಡನೇ ಆಯಸ್ಸನ್ನು ಕೊಟ್ಟಿದ್ದಾನೆ. ತೀವ್ರ ಗಾಯ ಮತ್ತು ನೋವಿನಿಂದ 2 ತಿಂಗಳು ಹಲ್ಲುಜ್ಜಲೂ ಕಷ್ಟವಾಗುತ್ತಿತ್ತು. 7 ತಿಂಗಳು ತೀವ್ರ ನೋವು ಅನುಭವಿಸಿದ್ದೇನೆ. ಗಾಲಿಕುರ್ಚಿಯಲ್ಲಿ ಜನರನ್ನು ಎದುರಿಸಲು ಸಾಧ್ಯವಾಗದೇ ನಾನು ಹೊರಗೆ ಬರಲು ಹಿಂಜರಿಯುತ್ತಿದ್ದೆ. ಹೀಗಾಗಿ ನಾನು ಕ್ರಿಕೆಟ್ ವೇಳೆ ಮೈದಾನಕ್ಕೂ ಬರುತ್ತಿರಲಿಲ್ಲ. ಈಗ ನಾನು ಕ್ರಿಕೆಟ್‌ಗೆ ಮರಳಿದ್ದೇನೆ. ಎಲ್ಲ ಒತ್ತಡ ಮರೆತು ಹೆಚ್ಚು ಉತ್ಸುಕನಾಗಿದ್ದೇನೆ. ಇದು ನನ್ನ ಎರಡನೇ ಜೀವನ ಎಂದು ಭಾವಿಸುತ್ತೇನೆ" ಎಂದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಘೋಷಿಸಿದ ನಂತರವೂ, ಅವರು ಬ್ಯಾಟ್ಸ್‌ಮನ್ ಆಗಿ ಮಾತ್ರವೇ, ವಿಕೆಟ್ ಕೀಪಿಂಗ್ ಮಾಡುತ್ತಾರೆಯೇ ಎಂಬ ಬಗ್ಗೆ ಅನುಮಾನಗಳಿದ್ದವು. ಆದರೆ, ಬ್ಯಾಟರ್, ವಿಕೆಟ್ ಕೀಪರ್, ನಾಯಕರಾಗಿಯೂ ಅವರು ತಂಡವನ್ನು ಮುನ್ನಡೆಸಿದರು. ಅಷ್ಟೇ ಅಲ್ಲ ತಮ್ಮಲ್ಲಿನ ಕ್ರಿಕೆಟ್ ಬತ್ತಿಲ್ಲ ಎಂಬುದನ್ನೂ ತೋರಿಸಿಕೊಟ್ಟರು. ಆಡಿದ 13 ಇನಿಂಗ್ಸ್‌ಗಳಲ್ಲಿ 40.55 ಸರಾಸರಿ, 155.40 ಸ್ಟ್ರೈಕ್ರೇಟ್ನಲ್ಲಿ 446 ರನ್ ಚಚ್ಚಿದರು.
ಇದನ್ನೂ ಓದಿ: ಟಿ-20 ವಿಶ್ವಕಪ್ಗೂ ವಿರಾಟ್ ಕೊಹ್ಲಿಯೇ ಕಿಂಗ್: ಚೇಸ್ ಮಾಸ್ಟರ್ ಗಳಿಸಿದ ರನ್ ಎಷ್ಟು ಗೊತ್ತಾ? - TOP 5 batters