ನವದೆಹಲಿ: ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ರಿಷಭ್ ಪಂತ್ ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಟೆಸ್ಟ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ ಹೆಚ್ಚು ಸ್ಕೋರ್ ಗಳಿಸಲು ಸಾಧ್ಯವಾಗದಿದ್ದರೂ ಎರಡನೇ ಇನ್ನಿಂಗ್ಸ್ನಲ್ಲಿ ಶತಕವನ್ನು ಸಿಡಿಸಿ ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ. ಅಲ್ಲದೇ ಈ ಶತಕದೊಂದಿಗೆ ಕ್ರಿಕೆಟ್ ದಂತಕಥೆ ಎಮ್ ಎಸ್ ಧೋನಿ ಅವರ ದಾಖಲೆಯನ್ನು ಪಂತ್ ಸರಿಗಟ್ಟಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಆಗಿ 6 ಶತಕಗಳನ್ನು ಸಹ ಪೂರೈಸಿದ್ದಾರೆ. ಈ ಹಿನ್ನೆಲೆ ಅಭಿಮಾನಿಗಳು ಪಂತ್ ಅವರನ್ನು ಧೋನಿ ಅವರಿಗೆ ಹೋಲಿಕೆ ಮಾಡಲು ಆರಂಭಿಸಿದ್ದಾರೆ. ಜತೆಗೆ ಈ ಇಬ್ಬರಲ್ಲಿ ಯಾರು ಬೆಸ್ಟ್ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ.
ಏತನ್ಮಧ್ಯೆ, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ದಿನೇಶ್ ಕಾರ್ತಿಕ್, ಧೋನಿ ಮತ್ತು ಪಂತ್ ಇಬ್ಬರಲ್ಲಿ ಯಾರು ಬೆಸ್ಟ್ ಎಂದು ತಿಳಿಸಿದ್ದಾರೆ. ಈ ವಿಚಾರವಾಗಿ ಕ್ರಿಕ್‌ಬಜ್‌ನೊಂದಿಗೆ ಮಾತನಾಡುವಾಗ, ಈ ಹೋಲಿಕೆ ತಪ್ಪು ಎಂದು ಹೇಳಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಧೋನಿ ಉನ್ನತ ಸ್ಥಾನದಲ್ಲಿದ್ದಾರೆ. ನಾಯಕ ಮತ್ತು ವಿಕೆಟ್ ಕೀಪರ್-ಬ್ಯಾಟರ್ ಆಗಿ, ಧೋನಿ ತಂಡಕ್ಕೆ ಅಗತ್ಯವಿರುವಾಗಲೆಲ್ಲ ರನ್ ಕಾಣಿಕೆ ನೀಡಿದ್ದಾರೆ. ಪಂತ್ ಇದುವರೆಗೆ 34 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅವರು ಕೂಡ ಉತ್ತಮ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಆದರೆ ಅವರು ಈಗಾಗಲೇ ಭಾರತದ ಶ್ರೇಷ್ಠ ವಿಕೆಟ್ ಕೀಪರ್ ಕಮ್ ಬ್ಯಾಟರ್ ಎಂದು ಹೇಳುವುದು ಸರಿಯಲ್ಲ ಎಂದಿದ್ದಾರೆ.
ಇದನ್ನೂ ಓದಿ: ದಯವಿಟ್ಟು ನನ್ನನ್ನು ಧೋನಿ ಜೊತೆ ಹೋಲಿಕೆ ಮಾಡಬೇಡಿ; ಪಂತ್ ಮನವಿ - Rishabh pant
ಧೋನಿ ಪ್ರಮುಖವಾಗಿ ಕಠಿಣ ಸಮಯದಲ್ಲೂ ತಂಡವನ್ನು ಮುನ್ನಡೆಸಿದ್ದಾರೆ ಮತ್ತು ವಿಕೆಟ್ ಕೀಪಿಂಗ್‌ನಲ್ಲೂ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಟೆಸ್ಟ್‌ನಲ್ಲಿ ತಂಡವನ್ನು ನಂಬರ್ 1 ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಈ ಎಲ್ಲಾ ದಾಖಲೆಗಳ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ ಎಂದು ದಿನೇಶ್ ಕಾರ್ತಿಕ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಯುವ ಬ್ಯಾಟರ್ ರಿಷಭ್ ಪಂತ್ ಆಕರ್ಷಕ ಪ್ರದರ್ಶನ ತೋರಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇದರಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ 39 ರನ್ ಗಳಿಸಿದ್ದ ಪಂತ್ ಎರಡನೇ ಇನ್ನಿಂಗ್ಸ್ನಲ್ಲಿ 109 ರನ್ಗಳ ಆಕರ್ಷಕ ಇನ್ನಿಂಗ್ಸ್ ಆಡಿದ್ದರು. ಇದರ ಬೆನ್ನಲ್ಲೇ ಅಭಿಮಾನಿಗಳು ಪಂತ್ ಅವರನ್ನು ಧೋನಿ ಅವರೊಂದಿಗೆ ಹೋಲಿಕೆ ಮಾಡಲು ಆರಂಭಿಸಿದ್ದಾರೆ.
ಇದನ್ನೂ ಓದಿ: ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ರೋಹಿತ್ ಶರ್ಮಾ: ವಿಶ್ವ ಕ್ರಿಕೆಟ್ನಲ್ಲೇ ಐತಿಹಾಸಿಕ ಸಾಧನೆ! - Rohit Sharma