ರಾಜ್‌ಕೋಟ್: ಕುಟುಂಬದ ವೈದ್ಯಕೀಯ ಕಾರಣಕ್ಕೆ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಿಂದ ಅರ್ಧದಲ್ಲೇ ಹೊರಬಂದಿದ್ದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ. ಪಂದ್ಯದ 4ನೇ ದಿನದಾಟದ ಹೊತ್ತಿಗೆ ತಂಡದ ಪರವಾಗಿ ಆಡಲಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.
ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಟೆಸ್ಟ್ನ 2ನೇ ದಿನದಾಟದ ವೇಳೆ ಕುಟುಂಬದ ತುರ್ತು ವೈದ್ಯಕೀಯ ಕಾರಣಕ್ಕೆ ಪಂದ್ಯವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಚೆನ್ನೈಗೆ ತೆರಳಿದ್ದ ಅಶ್ವಿನ್, ಪುನಃ ತಂಡ ಸೇರಲು ಸಜ್ಜಾಗಿದ್ದಾರೆ. ಅಲ್ಪ ಸಮಯದಲ್ಲೇ ಅವರು ಮತ್ತೆ ತಂಡ ಸೇರ್ಪಡೆಯಾಗುತ್ತಿರುವುದು ಸಂತೋಷದ ವಿಚಾರ. 4ನೇ ದಿನದಾಟದಲ್ಲಿ ಅಶ್ವಿನ್ ತಂಡದ ಪರ ಆಡಲಿದ್ದಾರೆ ಎಂದು ತಿಳಿಸಿದೆ.
ಸವಾಲಿನ ಸಮಯದಲ್ಲಿ ತಂಡದ ಮ್ಯಾನೇಜ್ಮೆಂಟ್, ಮಾಧ್ಯಮಗಳು, ಅಭಿಮಾನಿಗಳು ಅಶ್ವಿನ್ ಬೆಂಬಲಕ್ಕೆ ನಿಂತಿದ್ದಕ್ಕೆ ಧನ್ಯವಾದ ತಿಳಿಸಿದೆ. ಜೊತೆಗೆ ವೈಯಕ್ತಿಕ ಜೀವನವನ್ನೂ ಗೌರವಿಸಿ ಎಂದು ಕೋರಿದೆ.
ಪಂದ್ಯದ 2ನೇ ದಿನದಾಟದಲ್ಲಿ ಇಂಗ್ಲೆಂಡ್ ಜಾಕ್ ಕ್ರಾಲಿ ವಿಕೆಟ್ ಪಡೆದ ಬಳಿಕ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪಡೆದ ಭಾರತದ ಎರಡನೇ ಮತ್ತು ವಿಶ್ವದ 9 ನೇ ಬೌಲರ್ ಎನಿಸಿಕೊಂಡರು. ಅತೀ ಕಡಿಮೆ ಪಂದ್ಯ ಮತ್ತು ಎಸೆತಗಳಲ್ಲಿ ಇಷ್ಟು ವಿಕೆಟ್ಗಳ ಶಿಖರವೇರಿದ ವಿಶ್ವದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಆಸ್ಟ್ರೇಲಿಯಾದ ವೇಗಿ ಗ್ರೆನ್ ಮೆಕ್‌ಗ್ರಾತ್ ಟೆಸ್ಟ್ ಕ್ರಿಕೆಟ್ನಲ್ಲಿ 25,528 ಎಸೆತಗಳನ್ನು ಎಸೆದು 500 ವಿಕೆಟ್‌ಗಳನ್ನು ಪಡೆದು ಅಗ್ರ ಸ್ಥಾನದಲ್ಲಿದ್ದಾರೆ. ಈಗ ಆರ್.ಅಶ್ವಿನ್ 25,714 ಬಾಲ್ಗಳಲ್ಲಿ 500 ವಿಕೆಟ್ ಕಿತ್ತು ಅತೀ ಕಡಿಮೆ ಎಸೆತಗಳಲ್ಲಿ ಈ ಸಾಧನೆ ತೋರಿದ ಎರಡನೇ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ನಂತರದಲ್ಲಿ ಇಂಗ್ಲೆಂಡ್ನ ಮಧ್ಯಮ ವೇಗಿಗಳಾದ ಜೇಮ್ಸ್ ಆ್ಯಂಡರ್ಸನ್ (28,150 ಎಸೆತ), ಸ್ಟುವರ್ಟ್ ಬ್ರಾಡ್ (28,430 ಎಸೆತ) ಹಾಗೂ ವೆಸ್ಟ್ ಇಂಡೀಸ್ನ ಕರ್ಟ್ನಿ ವಾಲ್ಶ್ (28,833 ಎಸೆತ) ಸ್ಥಾನ ಹೊಂದಿದ್ದಾರೆ.
ಅತೀ ಕಡಿಮೆ ಪಂದ್ಯಗಳಲ್ಲಿ 500 ವಿಕೆಟ್‌ಗಳನ್ನು ಪಡೆದ ಜಗತ್ತಿನ ಬೌಲರ್ಗಳಲ್ಲಿ ಅಶ್ವಿನ್ ಎರಡನೇ ಸ್ಥಾನ ಪಡೆದರು. ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ 87 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿ ಅಗ್ರ ಸ್ಥಾನದಲ್ಲಿದ್ಧಾರೆ. ಅಶ್ವಿನ್ 98 ಪಂದ್ಯದಲ್ಲಿ ಈ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ: ಕಠಿಣ ಪರಿಶ್ರಮ, ಧೈರ್ಯ, ತಾಳ್ಮೆ - ಸರ್ಫರಾಜ್ ತಂದೆಗೆ ಥಾರ್ ಕಾರು ಗಿಫ್ಟ್: ಆನಂದ್ ಮಹೀಂದ್ರಾ ಘೋಷಣೆ