ಬೆಂಗಳೂರು: ಈ ಬಾರಿಯ ಐಪಿಎಲ್‌ನಲ್ಲಿ ಶರವೇಗ ಹಾಗೂ ಕರಾರುವಾಕ್ ಬೌಲಿಂಗ್ ದಾಳಿ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆಯುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡದ ಯುವ ಬೌಲರ್ ಮಯಾಂಕ್ ಯಾದವ್ಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ. ಲಕ್ನೋ ತಂಡದ ಸಹ ಆಟಗಾರ ಕ್ವಿಂಟನ್ ಡಿ ಕಾಕ್ ಅವರು ಮಯಾಂಕ್ ರಾಕೆಟ್ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧದ 28 ರನ್ ಗೆಲುವಿನ ಬಳಿಕ ಮಾತನಾಡಿದ ಬ್ಯಾಟರ್ ಕ್ವಿಂಟನ್ ಡಿ ಕಾಕ್, ನಮ್ಮ ತಂಡದ ಬೌಲರ್ ಮಯಾಂಕ್ ಯಾದವ್ ರಾಕೆಟ್ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಬಲಗೈ ವೇಗಿಯು ಸರಳವಾಗಿ ಬೌಲಿಂಗ್ ಪ್ರದರ್ಶಿಸುತ್ತ ಎಲ್ಎಸ್ಜಿ ತಂಡದ ಗೆಲುವಿನಲ್ಲಿ ಸಹಕರಿಸುತ್ತಿದ್ದಾರೆ ಎಂದು ಹೇಳಿದರು.
ತಂಡದ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಡಿ ಕಾಕ್, "ಪಿಚ್ನಲ್ಲಿ ಬೌನ್ಸ್ ಇತ್ತು. ಆರಂಭದಲ್ಲಿ ಕೆಲ ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ ಸುದೀರ್ಘ ಬ್ಯಾಟಿಂಗ್ ಮಾಡಲು ಬಯಸಿದ್ದೆವು. ನಿಕೋಲಸ್ ಪೂರನ್ ಉತ್ತಮ ಆಟ ತೋರಿದರು. ಇದೇ ಮೈದಾನದಲ್ಲಿ ಈ ಹಿಂದೆ ಆಡಿದ ಅನುಭವವಿದ್ದರೂ ಸಹ ಆರಂಭಿಕ ಆಟಗಾರನಿಗೆ ಪರಿಸ್ಥಿತಿ ಎಂದಿಗೂ ಒಂದೇ ರೀತಿ ಇರುವುದಿಲ್ಲ" ಎಂದರು.
ರಾಹುಲ್ ಮೆಚ್ಚುಗೆ: ''ಮಯಾಂಕ್ ಎಸೆತ ಒಂದು ಚೆಂಡು ನನಗೆ ತುಂಬಾ ಬಲವಾಗಿ ತಟ್ಟಿತ್ತು, ಕಳೆದೆರಡು ಪಂದ್ಯಗಳಲ್ಲಿ ಮಯಾಂಕ್ ಬೌಲಿಂಗ್ ರೀತಿ ನೋಡಿ ತುಂಬಾ ಸಂತಸ ತಂದಿದೆ. ದುರದೃಷ್ಟವಶಾತ್ ಹಾಗೂ ಗಾಯದಿಂದಾಗಿ ಹೊರಗಿದ್ದ ಮಯಾಂಕ್ ಕಳೆದ ಎರಡು ಸೀಸನ್‌ಗಳಿಂದ ತಾಳ್ಮೆಯಿಂದ ಡಗ್-ಔಟ್‌ನಲ್ಲಿ ಕಾಯುತ್ತಿದ್ದರು. ಬಾಂಬೆಯಲ್ಲಿ ಫಿಸಿಯೋಗಳೊಂದಿಗೆ ನಿಜವಾಗಿಯೂ ಶ್ರಮ ವಹಿಸಿದ್ದಾರೆ" ಎಂದು ಸೂಪರ್ ಜೈಂಟ್ಸ್ ನಾಯಕ ಕೆ.ಎಲ್.ರಾಹುಲ್ ಹೇಳಿದರು.
ಇದೇ ವೇಳೆ ಸೋಲಿನ ನಂತರ ಅನಿಸಿಕೆ ಹಂಚಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಕೂಡ ಮಯಾಂಕ್ ಯಾದವ್ ಅವರನ್ನು ಹಾಡಿ ಹೊಗಳಿದರು. ಮಯಾಂಕ್ ಯಾದವ್ ಅವರು ತುಂಬಾ ಮಾರಕವಾಗಿರುವ ಕೌಶಲ್ಯ ಹೊಂದಿದ್ದಾರೆ ಎಂದರು. "ಯಾವುದೇ ಹೊಸ ಯುವ ವೇಗದ ಬೌಲರ್ ಅನ್ನು ನೀವು ಮೊದಲು ಸಲ ಎದುರಿಸುವುದು ಸುಲಭವಲ್ಲ. ಅದ್ಭುತ ವೇಗದ ಜೊತೆಗೆ ನಿಯಂತ್ರಣ ಹಾಗೂ ಶಿಸ್ತಿನಿಂದ ಬೌಲಿಂಗ್ ಮಾಡುವ ಮಯಾಂಕ್ ಸಾಮರ್ಥ್ಯ ಮೆಚ್ಚುವಂತಹದ್ದಾಗಿದೆ. ವೇಗದೊಂದಿಗೆ ನಿಖರತೆಯನ್ನೂ ಹೊಂದಿದ್ದಾರೆ" ಎಂದು ಡು ಪ್ಲೆಸಿಸ್ ಹೇಳಿದರು.
ತಂಡದ ಪ್ರದರ್ಶನದ ಕುರಿತು ಪ್ರತಿಕ್ರಿಯಿಸಿದ ನಾಯಕ ಪ್ಲೆಸಿಸ್, " ನಾವು ನಮ್ಮ ಬೌಲಿಂಗ್ ಉತ್ತಮವಾಗಿತ್ತೆಂದು ಅನ್ನಿಸಲಿಲ್ಲ. ಪವರ್‌ಪ್ಲೇಯಲ್ಲಿ ಬಹಳಷ್ಟು ತಪ್ಪುಗಳ ಜೊತೆಗೆ ನಾವು ಸುಲಭದ ಬೌಂಡರಿಗಳನ್ನು ನೀಡಿದೆವು. ಬಳಿಕ ಕಮ್ಬ್ಯಾಕ್ ಮಾಡಲು ಕೆಲವು ಉತ್ತಮ ಡೆತ್ ಓವರ್‌ಗಳು ಮೂಡಿಬಂದವು. ಆದರೆ ಗೆಲುವಿಗೆ ಜೊತೆಯಾಟಗಳು ಅಗತ್ಯ. ಪ್ರಮುಖವಾಗಿ ನಮಗದು ಸಾಧ್ಯವಾಗಲಿಲ್ಲ. ಇದು ನಿರಾಶಾದಾಯಕ, ಆದರೆ ತಂಡ ಮೇಲುಗೈ ಸಾಧಿಸಲು ಕೆಲವು ಪ್ರಮುಖ ಆಟಗಾರರ ಪಾತ್ರವು ಮುಖ್ಯವಾಗಿದೆ" ಎಂದು ತಿಳಿಸಿದರು.
ಮಯಾಂಕ್ ಯಾದವ್ ಅವರು ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್ ಮತ್ತು ರಜತ್ ಪಾಟಿದಾರ್ ವಿಕೆಟ್ ಕಿತ್ತು ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣರಾದರು. ಯುವ ವೇಗಿಯು ಐಪಿಎಲ್‌ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಮೂರು ವಿಕೆಟ್ ಪಡೆದ ಆರನೇ ಬೌಲರ್ ಎನಿಸಿಕೊಂಡಿದ್ದಾರೆ. ಜೊತೆಗೆ, 156.7 ಕಿಲೋಮೀಟರ್ ವೇಗದ ಎಸೆತದ ಮೂಲಕ ಈ ಆವೃತ್ತಿಯ ಅತ್ಯಂತ ವೇಗದ ಬಾಲ್ ದಾಖಲೆ ಮಾಡಿದ್ದಾರೆ. ಇದು ಪಂದ್ಯಾವಳಿಯ ಇತಿಹಾಸದಲ್ಲಿಯೇ ಒಟ್ಟಾರೆ ನಾಲ್ಕನೇ ವೇಗದ ಎಸೆತವಾಗಿದೆ.
ಇದನ್ನೂ ಓದಿ: ಆರ್‌ಸಿಬಿ ವಿರುದ್ಧ ರಾಹುಲ್ ಪಡೆಗೆ 28 ರನ್ ಗೆಲುವು: ಬೆಂಗಳೂರಿಗೆ ಮೂರನೇ ಸೋಲು - IPL 2024