ಚೆನ್ನೈ: ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಸಿಎಸ್‌ಕೆ ಭದ್ರಕೋಟೆಯಲ್ಲಿ ವಿಜಯದ ಬಾವುಟ ಹಾರಿಸಿದೆ.
ಚೆನ್ನೈನ ಎಂ.ಎ ಚಿದಾಂಬರಂ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಚೆನ್ನೈ ನೀಡಿದ್ದ 163 ರನ್ಗಳನ್ನು ಬೆನ್ನಟ್ಟಿದ ಪಂಜಾಬ್, ಜಾನಿ ಬೇರ್ಸ್ಟೋ (46), ರಿಲೀ ರೊಸೊವ್ (43) ಬ್ಯಾಟಿಂಗ್ ಬಲದಿಂದ 17.3 ಓವರ್ಗಳಲ್ಲಿ ಗುರಿ ತಲುಪಿತು. ಇವರಿಬ್ಬರು ಎರಡನೇ ವಿಕೆಟ್‌ಗೆ 64 ರನ್‌ಗಳ ಜೊತೆಯಾಟ ಆಡಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದು ನಿರ್ಗಮಿಸಿದರು. ಶಿವಂ ದುಬೆ 10ನೇ ಓವರ್‌ನಲ್ಲಿ ಬೈರ್‌ಸ್ಟೋ ವಿಕೆಟ್ ಪಡೆದರೇ, ಶಾರ್ದೂಲ್ ಠಾಕೂರ್ 12ನೇ ಓವರ್‌ನಲ್ಲಿ ರೊಸೊವ್ ಅವರನ್ನು ಬೌಲ್ಡ್ ಮಾಡಿದರು. ನಂತರ ಜವಾಬ್ದಾರಿ ಹೊತ್ತ ಶಶಾಂಕ್ ಸಿಂಗ್ (25*) ಮತ್ತು ನಾಯಕ ಸ್ಯಾಮ್ ಕರ್ರಾನ್ (26*) ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸಿಎಸ್‌ಕೆ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 162 ರನ್ಗಳಿಸಿತ್ತು. ಸಿಎಸ್‌ಕೆ ಪರ ಗಾಯಕ್ವಾಡ್ ಮತ್ತು ಅಜಿಂಕ್ಯ ರಹಾನೆ (24 ಎಸೆತಗಳಲ್ಲಿ 29) ಮೊದಲ ವಿಕೆಟ್‌ಗೆ 64 ರನ್ ಸೇರಿಸಿ ದೊಡ್ಡ ಸ್ಕೋರ್ ಕಲೆ ಹಾಕುವ ಸೂಚನೆ ನೀಡಿದ್ದರು. ಆದರೆ ಹರ್‌ಪ್ರೀತ್ ಬ್ರಾರ್ ಒಂಬತ್ತನೇ ಓವರ್‌ನಲ್ಲಿ ರಹಾನೆ ಮತ್ತು ಶಿವಂ ದುಬೆ (0) ಅವರನ್ನು ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಸಿಎಸ್ಕೆಗೆ ಶಾಕ್ ನೀಡಿದರು.
ಬಳಿಕ ಬಂದ ರವೀಂದ್ರ ಜಡೇಜಾ (2), ಮೊಯಿನ್ ಅಲಿ (15), ರಿಜ್ವಿ (21), ಧೋನಿ (11) ಬಹುಬೇಗ ಪವಿಲಿಯನ್ ಸೇರಿದ್ದರಿಂದ ತಂಡ ಸಾಮಾನ್ಯ ಮೊತ್ತವನ್ನು ಕಲೆಹಾಕಿತು. ನಾಯಕ ರುತುರಾಜ್ ಗಾಯಕ್ವಾಡ್ ಹೈಸ್ಕೋರರ್ ಎನಿಸಿಕೊಂಡರು. 48 ಎಸೆತಗಳಲ್ಲಿ 5 ಬೌಂಡರಿ ಮತ್ತು ಎರಡು ಸಿಕ್ಸರ್ ಸಮೇತ 62 ರನ್‌ಗಳ ಇನಿಂಗ್ಸ್ ಆಡಿದರು. ಪಂಜಾಬ್ ಪರ ರಾಹುಲ್ ಚಹಾರ್ 2, ಕಗಿಸೊ ರಬಾಡ ಮತ್ತು ಅರ್ಶ್ದೀಪ್ ತಲಾ 1 ವಿಕೆಟ್ ಪಡೆದರು.
ಸಿಎಸ್‌ಕೆ ವಿರುದ್ದ ಸತತ ಐದನೇ ಗೆಲುವು: ಪಂಜಾಬ್ ತಂಡ ಸಿಎಸ್‌ಕೆ ವಿರುದ್ಧ ಸತತ ಐದನೇ ಗೆಲುವು ಸಾಧಿಸಿದೆ. ಐಪಿಎಲ್‌ನಲ್ಲಿ ಸಿಎಸ್‌ಕೆ ವಿರುದ್ಧ ಈ ಸಾಧನೆ ಮಾಡಿದ ಎರಡನೇ ತಂಡವಾಗಿದೆ. ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್ ತಂಡ ಸಿಎಸ್‌ಕೆ ವಿರುದ್ದ ಸತತ ಐದು ಪಂದ್ಯಗಳನ್ನು ಗೆದ್ದಿದೆ ಈ ದಾಖಲೆ ಬರೆದಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್ಗೆ ಆಯ್ಕೆಯಾದ ಟೀಂ ಇಂಡಿಯಾದಲ್ಲಿ IPL ತಂಡಗಳ ಪ್ರಾತಿನಿಧ್ಯವೆಷ್ಟು? - T20 World Cup 2024