ಪ್ಯಾರಿಸ್: ಕ್ರೀಡೆಗಳ ಮಹಾಸಂಗಮವಾದ ಒಲಿಂಪಿಕ್ಸ್ ಈ ಬಾರಿ ಫ್ರಾನ್ಸ್‌ನಲ್ಲಿ ನಡೆಯಲಿದೆ. ಪ್ಯಾರಿಸ್ ಒಲಿಂಪಿಕ್ಸ್ಗೆ 100 ದಿನಗಳು ಮಾತ್ರ ಬಾಕಿ ಇದ್ದು, ಅದ್ಧೂರಿ ಉದ್ಘಾಟನೆಗೆ ಸಿದ್ಧತೆಗಳು ನಡೆಯುತ್ತಿವೆ. ಸೀನ್ ನದಿ ಮೇಲೆ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಲು ಯೋಜಿಸಲಾಗಿತ್ತು. ಆದರೆ, ಭದ್ರತೆ ಮತ್ತು ಸುರಕ್ಷತೆ ಕಾರಣಗಳಿಗಾಗಿ ಕ್ರೀಡಾಂಗಣದಲ್ಲಿ ನಡೆಸುವ ಸಾಧ್ಯತೆ ಇದೆ.
ಇಲ್ಲಿ ಹರಿಯುತ್ತಿರುವ ಸೀನ್ ನದಿಯು ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನೆಗೆ ವೇದಿಕೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಭದ್ರತೆ ಮತ್ತು ಸುರಕ್ಷತಾ ಅಡ್ಡಿಗಳು ಇರುವ ಕಾರಣ ಇನ್ನೂ ಯಾವುದು ನಿಕ್ಕಿಯಾಗಿಲ್ಲ. ಸೀನ್ ನದಿಯ ಮೇಲೆ ಒಲಿಂಪಿಕ್ಸ್ ಕೂಟವನ್ನು ಅದ್ಧೂರಿಯಾಗಿ ಆರಂಭಿಸುವ ಇರಾದೆ ಇದೆ. ಸುರಕ್ಷತಾ ನಿಯಮಗಳ ಅನುಸಾರ ಆಯೋಜನೆ ಮಾಡಲಾಗುವುದು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಅಗತ್ಯಬಿದ್ದರೆ ಸ್ಥಳ ಬದಲು: ಸೀನ್ ನದಿಯ ಮೇಲೆ ಉದ್ಘಾಟನಾ ಕಾರ್ಯಕ್ರಮ ನಡೆದಲ್ಲಿ ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗೆ ನಡೆದ ಕಾರ್ಯಕ್ರಮ ಇದಾಗಲಿದೆ. ಸುರಕ್ಷತಾ ಕ್ರಮಗಳು ಸಾಕಾಗದಿದ್ದಲ್ಲಿ ಸಮಾರಂಭವನ್ನು ಸ್ಟೇಡ್ ಡಿ ಫ್ರಾನ್ಸ್ ರಾಷ್ಟ್ರ್ರೀಯ ಕ್ರೀಡಾಂಗಣದಲ್ಲಿ ನಡೆಸಲಾಗುವುದು ಎಂದು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ತಿಳಿಸಿದ್ದಾರೆ. ಆದರೂ ನಾವು ಈ ಕಾರ್ಯಕ್ರಮವನ್ನು ನದಿಯಲ್ಲಿ ಆಯೋಜಿಸಲು ಬದ್ಧರಾಗಿದ್ದೇವೆ ಎಂದಿದ್ದಾರೆ.
ನದಿಯಲ್ಲಿ ಸುಮಾರು 6 ಕಿಲೋಮೀಟರ್ ದೂರದವರೆಗೆ 10,500 ಕ್ರೀಡಾಪಟುಗಳನ್ನು ದೋಣಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಉದ್ಘಾಟನಾ ದಿನವಾದ ಜುಲೈ 26 ರಂದು ನದಿಯ ಎರಡೂ ಬದಿಗಳಲ್ಲಿ 6 ಲಕ್ಷ ಜನರಿಗೆ ಕಾರ್ಯಕ್ರಮ ವೀಕ್ಷಿಸಲು ಅವಕಾಶ ನೀಡುವ ಬಗ್ಗೆ ಯೋಜಿಸಲಾಗಿತ್ತು. ಆದರೆ, ಸುರಕ್ಷತಾ ಕ್ರಮಗಳ ಕಾರಣ ಈ ಸಂಖ್ಯೆಯನ್ನು 3 ಲಕ್ಷಕ್ಕೆ ಇಳಿಸಲಾಗಿದೆ.
ಟ್ರ್ಯಾಕ್ ಬಣ್ಣ ಬದಲು: ಇನ್ನೊಂದೆಡೆ, ಒಲಿಂಪಿಕ್ಸ್ ಟ್ರ್ಯಾಕ್ನ ಬಣ್ಣವನ್ನು ಬದಲಿಸಲು ಸಿದ್ಧತೆ ನಡೆದಿದೆ. ಸಾಮಾನ್ಯವಾಗಿ ಓಟದ ಸ್ಪರ್ಧೆಗಳಿಗೆ ಬಳಸುವ ಟ್ರ್ಯಾಕ್ ಇಟ್ಟಿಗೆ ಕೆಂಪು ಬಣ್ಣದಿಂದ ಕೂಡಿರುತ್ತದೆ. ಆದರೆ, ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಟ್ರ್ಯಾಕ್ ಅನ್ನು ನೇರಳೆ ಬಣ್ಣದಲ್ಲಿ ತಯಾರಿಸಲಾಗುತ್ತಿದೆ. ರಾಷ್ಟ್ರೀಯ ಕ್ರೀಡಾಂಗಣವಾದ ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ಇದನ್ನು ಇಟಲಿಯ ಸಂಸ್ಥೆಯು ನಿರ್ಮಿಸುತ್ತಿದೆ. ಇಟಲಿಯಲ್ಲಿ ತಯಾರಾಗಿರುವ ಈ ಟ್ರ್ಯಾಕ್ ಅಳವಡಿಕೆಗೆ 1 ತಿಂಗಳು ಸಮಯ ಬೇಕಿದೆ.
ಇಂದು ಒಲಿಂಪಿಕ್ಸ್ ಜ್ಯೋತಿ: ಏಪ್ರಿಲ್ 16 ರಂದು (ಮಂಗಳವಾರ) ಗ್ರೀಸ್‌ನ ಒಲಿಂಪಿಯಾದಲ್ಲಿ ಒಲಿಂಪಿಕ್ಸ್ ಜ್ಯೋತಿ ಬೆಳಗಿಸುವ ಸಮಾರಂಭ ನಡೆಯಲಿದೆ. ಇದು ವಿಶ್ವದ ಹಲವು ದೇಶಗಳನ್ನು ಸುತ್ತಿ ಫ್ರಾನ್ಸ್ಗೆ ಬರಲಿದೆ.
ಇದನ್ನೂ ಓದಿ: ಟಿ20 ಇತಿಹಾಸದಲ್ಲಿ ದಾಖಲೆ ರನ್ ಚಚ್ಚಿದ ಹೈದರಾಬಾದ್: ಆರ್ಸಿಬಿಗೆ 6ನೇ ಸೋಲು, ಫ್ಲೇ ಆಫ್ ಕನಸು ಭಗ್ನ? - RCB vs SH result