ಪಾಟ್ನಾ (ಬಿಹಾರ): ಪ್ಯಾರಿಸ್ ಒಲಿಂಪಿಕ್ಸ್ಗೆ ಅದ್ಧೂರಿ ಚಾಲನೆ ಸಿಕ್ಕಿದೆ. ದೇಶದ ಪರವಾಗಿ 117 ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, ಇಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳ ಪೈಕಿ ಬಿಹಾರದ ಶಾಸಕರೊಬ್ಬರು ಇರುವುದು ವಿಶೇಷವಾಗಿದೆ. ರಾಜಕೀಯ ನಾಯಕರಿಗೆ ವಿಶೇಷ ಎಂಟ್ರಿ ಇರುತ್ತದೆ ಎನ್ನಲಾಗುತ್ತಿದೆ. ಆದರೆ ಇದಕ್ಕೆ ಅಪವಾದ ಎಂಬಂತೆ, ತಮ್ಮ ಸಾಧನೆಯ ಮೂಲಕವೇ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ಪ್ರವೇಶ ಪಡೆದುಕೊಂಡಿದ್ದಾರೆ ಈ ಶಾಸಕಿ. ಏಕೆಂದರೆ ಶ್ರೇಯಸಿ ಸಿಂಗ್ ಬಿಹಾರದ ಜಮುಯಿಯಿಂದ ಶಾಸಕಿಯಾಗಿ ಆಯ್ಕೆಯಾಗುವ ಮುನ್ನ ಶೂಟಿಂಗ್ ಸ್ಪರ್ಧಿಯಾಗಿದ್ದರು. ಅವರ ಪದಕಗಳ ಸಾಧನೆ ಗುರುತಿಸಿ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
2014 ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶ್ರೇಯಸಿ ಸಿಂಗ್ ಡಬಲ್ ಟ್ರ್ಯಾಪ್ ವಿಭಾಗದಲ್ಲಿ ಬೆಳ್ಳಿ ಪದಕ ಮತ್ತು 2018 ರಲ್ಲಿ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಸ್ಪರ್ಧೆಗಳಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡು ಗಮನ ಸೆಳೆದಿದ್ದರು.
ಅಂದ ಹಾಗೆ ಅಥ್ಲೀಟ್ ಶ್ರೇಯಸಿ ಸಿಂಗ್ ಬಿಹಾರದ ಗಿಡೂರು ಎಂಬಲ್ಲಿ ಜನಿಸಿದವರು. ಅವರು ದೆಹಲಿಯ ಹಂಸರಾಜ್ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ನಂತರ ಫರಿದಾಬಾದ್‌ನ ಮಾನವರಚನಾ ವಿಶ್ವವಿದ್ಯಾಲಯದಲ್ಲಿ ಎಂಬಿಎ ಕೂಡಾ ಅಭ್ಯಾಸ ಮಾಡಿದ್ದಾರೆ. 2020ರ ರಾಜ್ಯ ಚುನಾವಣೆಯಲ್ಲಿ ಮಾಜಿ ಶಾಸಕ ವಿಜಯ್ ಪ್ರಕಾಶ್ ವಿರುದ್ಧ ಶ್ರೇಯಸಿ 41 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿ ಶಾಸಕಿಯಾಗಿಯೂ ಆಯ್ಕೆ ಆಗಿದ್ದಾರೆ. ಇವರು ಬಿಹಾರದ ಮಾಜಿ ಸಂಸದ ದಿಗ್ವಿಜಯ್ ಸಿಂಗ್ ಅವರ ಪುತ್ರಿ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ತಂದೆ ಅಷ್ಟೇ ಏಕೆ, ತಾಯಿ ಪುತುಲ್ ಸಿಂಗ್, ಬಂಕಾ ಕ್ಷೇತ್ರದ ಸಂಸದೆಯಾಗಿದ್ದಾರೆ. ತಾಯಿ - ತಂದೆ ಇಬ್ಬರೂ ರಾಜಕೀಯದಲ್ಲಿ ಇರುವುದರಿಂದ ಅದೇ ಕ್ಷೇತ್ರದಲ್ಲೂ ಶ್ರೇಯಸಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಿ ಗೆಲುವು ಸಾಧಿಸಿದ್ದಾರೆ. ಅಜ್ಜ ಕುಮಾರ್ ಸೆರೆಂದರ್ ಸಿಂಗ್, ತಂದೆ ದಿಗ್ವಿಜಯ್, ಇಬ್ಬರೂ ರಾಷ್ಟ್ರೀಯ ರೈಫಲ್ ಅಸೋಸಿಯೇಶನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವುದು ಗಮನಾರ್ಹ.
ಆ ಪ್ರೇರಣೆಯಿಂದಲೇ ಅವರು ಶೂಟಿಂಗ್‌ನಲ್ಲಿ ವೃತ್ತಿಜೀವನವನ್ನು ಕಟ್ಟಿಕೊಳ್ಳಲು ಬಯಸಿದ್ದರು. ಆದರೆ, ಶಾಸಕರಾಗಿ ಆಯ್ಕೆಯಾದ ನಂತರ ಹೆಚ್ಚಿನ ಸಮಯವನ್ನು ಕ್ಷೇತ್ರದಲ್ಲೇ ಕಳೆಯಬೇಕಾಯಿತು. ಅಲ್ಲಿ ಶಾಟ್ ಗನ್ ರೇಂಜ್ ಇಲ್ಲದ ಕಾರಣ ಅಭ್ಯಾಸಕ್ಕೆ ದೆಹಲಿಗೆ ಹೋಗಕಿತ್ತು. ಇದು ಸ್ವಲ್ಪ ಕಷ್ಟವಾದರೂ ಎರಡನ್ನೂ ಸರಿದೂಗಿಸುವುದಕ್ಕೋಸ್ಕರ ಶ್ರೇಯಸಿ ದೆಹಲಿ ಹಾಗೂ ಬಿಹಾರಕ್ಕೆ ಪದೇ ಪದೇ ರೈಲು ಪ್ರಯಾಣ ಮಾಡುತ್ತಿದ್ದರು.