ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024 ಆರಂಭಗೊಂಡು 4 ದಿನಗಳು ಕಳೆದಿವೆ. ಜಾಗತಿಕ ಮಹತ್ವದ ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ ಕೇವಲ 2 ಪದಕಗಳನ್ನು ಮಾತ್ರ ಗೆದ್ದಿದೆ. ಮಂಗಳವಾರ ರಾತ್ರಿ ಭಾರತ ಹಲವು ಸ್ಪರ್ಧೆಗಳಲ್ಲಿ ಸೋಲು ಕಂಡಿತು.
ಆರ್ಚರಿಯಲ್ಲಿ ಹಿನ್ನಡೆ : ಆರ್ಚರಿ 32ನೇ ಸುತ್ತಿನ ಪುರುಷರ ಸಿಂಗಲ್ಸ್ ಎಲಿಮಿನೇಷನ್ ಪಂದ್ಯದಲ್ಲಿ ಧೀರಜ್ ಬೊಮ್ಮದೇವರ ಸೋಲನುಭವಿಸಿದರು. 22 ವರ್ಷದ ಧೀರಜ್ ಎರಡನೇ ಸುತ್ತಿನಲ್ಲಿ ಎದುರಾಳಿ ಕೆನಡಾದ ಎರಿಕ್ ಪೀಟರ್ಸ್ ವಿರುದ್ಧ ಐದು ಸೆಟ್‌ಗಳ ನಂತರ ತಲಾ ಐದು ಪಾಯಿಂಟ್‌ಗಳೊಂದಿಗೆ ಸಮಬಲ ಸಾಧಿಸಿದರು. ಅದರಂತೆ, ತಮ್ಮ ಕೊನೆಯ ರೌಂಡ್ನಲ್ಲೂ ಅದ್ಭುತ ಹೊಡೆತದೊಂದಿಗೆ 10 ಅಂಕಗಳನ್ನು ಗಳಿಸಿದರೂ ಸ್ಪರ್ಧೆಯಿಂದ ಹೊರಬಿದ್ದರು. ಶೂಟ್ಆಫ್ನಲ್ಲಿ ಧೀರಜ್ ಬಾಣದ ಗುರಿಗಿಂತಲೂ ಪೀಟರ್ಸ್ ಬಾಣ 2.4 ಸೆಂಟಿಮೀಟರ್‌ಗಳಷ್ಟು ಕೇಂದ್ರ ಬಿಂದುವಿಗೆ ಸಮೀಪದಲ್ಲಿತ್ತು. ಹಾಗಾಗಿ ತೀರ್ಪು ಪೀಟರ್ಸ್ ಪರವಾಯಿತು.
ಬಾಕ್ಸಿಂಗ್ನಲ್ಲೂ ಸೋಲು: ಇದಲ್ಲದೇ, ಜಾಸ್ಮಿನ್ ಲಂಬೋರಿಯಾ ಮಹಿಳೆಯರ 57 ಕೆಜಿ ವಿಭಾಗದ ಸ್ಫರ್ಧೆಯಲ್ಲಿ ಫಿಲಿಪ್ಪೀನ್ಸ್ ಬಾಕ್ಸರ್ ನೆಸ್ಟಿ ಪೆಟೆಸಿಯೊ ವಿರುದ್ಧ 5-0 ಅಂತರದಿಂದ ಸೋಲು ಕಂಡರು. ನೆಸ್ಟಿ ಮೊದಲ ಸುತ್ತಿನಿಂದ ಅಂತಿಮ ಸುತ್ತಿನವರೆಗೂ ಜಾಸ್ಮಿನ್ ವಿರುದ್ಧ ಪ್ರಾಬಲ್ಯ ಮೆರೆದು ಒಂದೇ ಒಂದು ಸುತ್ತಿನಲ್ಲೂ ಜಾಸ್ಮಿನ್ಗೆ ಗೆಲ್ಲಲು ಅವಕಾಶ ನೀಡಲಿಲ್ಲ. ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಪೆಟೆಸಿಯೊ ಭಾರತದ ಬಾಕ್ಸರ್ ವಿರುದ್ಧ 30-27, 30-27, 30-27, 29-28 ಮತ್ತು 29-28 ಅಂತರದಿಂದ ಗೆಲುವಿನ ನಗೆ ಬೀರಿದರು.
ಮಂಗಳವಾರದಂದೇ ನಡೆದ ಮಹಿಳೆಯರ 54 ಕೆಜಿ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ನಿರಾಸೆಯಾಯಿತು. ಬಾಕ್ಸರ್ ಪ್ರೀತಿ ಪವಾರ್ ಕೊಲಂಬಿಯಾದ ಯೆನಿ ಮಾರ್ಸೆಲಾ ಅರಿಯಾಸ್ ಕ್ಯಾಸ್ಟನೆಡಾ ವಿರುದ್ಧ ಕಠಿಣ ಪೈಪೋಟಿ ನೀಡಿದರಾದರೂ ಅಂತಿಮವಾಗಿ 2-3 ಅಂತರದಿಂದ ಸೋಲನುಭವಿಸಿದರು. ಇದರೊಂದಿಗೆ ಅವರ ಪ್ಯಾರಿಸ್ ಒಲಿಂಪಿಕ್ಸ್ ಅಭಿಯಾನ ಅಂತ್ಯಗೊಂಡಿತು.
ಇದಕ್ಕೂ ಮೊದಲು ಪುರುಷರ 51 ಕೆಜಿ ವಿಭಾಗದ 16ನೇ ಸುತ್ತಿನ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಪಂಗಲ್ ಸೋಲನುಭವಿಸಿದ್ದು ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ ಅಭಿಯಾನ ಮುಗಿಸಿದರು. ಈ ಪಂದ್ಯದಲ್ಲಿ ಅವರು ಆಫ್ರಿಕನ್ ಗೇಮ್ಸ್ ಚಾಂಪಿಯನ್ ಮತ್ತು ಜಾಂಬಿಯಾದ ಮೂರನೇ ಶ್ರೇಯಾಂಕದ ಪ್ಯಾಟ್ರಿಕ್ ಚಿನ್ಯೆಂಬಾ ವಿರುದ್ಧ 1-4 ಅಂತರದಿಂದ ವೈಫಲ್ಯ ಅನುಭವಿಸಿದರು.
ಇದನ್ನೂ ಓದಿ: ಬ್ಯಾಡ್ಮಿಂಟನ್: ಇಂಡೋನೇಷ್ಯಾ ವಿರುದ್ಧ ಸಾತ್ವಿಕ್ - ಚಿರಾಗ್ ಜೋಡಿಗೆ ಗೆಲುವು - Paris Olympics 2024