ನವದೆಹಲಿ: ಭಾರತದ ಪುರುಷ ಮತ್ತು ಮಹಿಳಾ ಟೇಬಲ್ ಟೆನಿಸ್ ತಂಡಗಳು ಪ್ಯಾರಿಸ್ ಒಲಿಂಪಿಕ್ಸ್‌ಗೆ ಶ್ರೇಯಾಂಕದ ಆಧಾರದ ಮೇಲೆ ಅರ್ಹತೆ ಪಡೆದಿವೆ. ಪ್ಯಾರಿಸ್ ಒಲಿಂಪಿಕ್ಸ್ನ ಅರ್ಹತಾ ಸುತ್ತಿನಲ್ಲಿ ಸೋತಿದ್ದ ತಂಡಗಳು ಭಾರೀ ನಿರಾಸೆ ಅನುಭವಿಸಿದ್ದವು. ವಿಶ್ವದ ದೊಡ್ಡ ಕ್ರೀಡಾಕೂಟದಿಂದ ತಪ್ಪಿಸಿಕೊಳ್ಳುವ ಭೀತಿಯಲ್ಲಿದ್ದ ತಂಡಗಳಿಗೆ ಸಿಹಿಸುದ್ದಿ ಸಿಕ್ಕಿದೆ.
ಅರ್ಹತಾ ಪಂದ್ಯಗಳಲ್ಲಿ ಸೋತರೂ ತಂಡಗಳು ವಿಶ್ವ ಟೇಬಲ್ ಟೆನಿಸ್ ಶ್ರೇಯಾಂಕ ಪಟ್ಟಿಯಲ್ಲಿನ ಉತ್ತಮ ಸ್ಥಾನದಿಂದಾಗಿ ಇತ್ತಂಡಗಳನ್ನು ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಶನ್ (ಐಟಿಟಿಎಫ್) ಸೋಮವಾರ ತಿಳಿಸಿತು.
ಇದೇ ಮೊದಲ ಬಾರಿಗೆ ಭಾರತದ ಪುರುಷ ಮತ್ತು ಮಹಿಳಾ ತಂಡಗಳೆರಡೂ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದುಕೊಂಡಿವೆ. 2020ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ತಂಡ ಸೆಣಸಾಡಿತ್ತು. ಇದರಲ್ಲಿ ಹಿರಿಯ ಟಿಟಿ ಆಟಗಾರ ಶರತ್ ಕಮಲ್, ಸತ್ಯನ್ ಜ್ಞಾನಶೇಖರನ್, ಸುತೀರ್ಥ ಮುಖರ್ಜಿ ಮತ್ತು ಮಣಿಕಾ ಬಾತ್ರಾ ಅವರಿದ್ದರು. ಸಿಂಗಲ್ಸ್ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಸ್ಪರ್ಧಿಸಿದ್ದರೂ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇನ್ನು, 2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಟಿಟಿ ಗೇಮ್ ಅನ್ನು ಪರಿಚಯಿಸಲಾಗಿತ್ತು.
ತಂಡಗಳ ಶ್ರೇಯಾಂಕ ಇಂತಿದೆ: ವಿಶ್ವ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಭಾರತೀಯ ಪುರುಷರು 15ನೇ ಸ್ಥಾನ, ಮಹಿಳೆಯರು 13ನೇ ಶ್ರೇಯಾಂಕದಲ್ಲಿದ್ದಾರೆ. ಇತ್ತೀಚಿಗೆ ಶ್ರೇಯಾಂಕ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ಉತ್ತಮ ಸಾಧನೆ ಮಾಡಿದ ಭಾರತೀಯ ತಂಡಗಳನ್ನು ಒಲಿಂಪಿಕ್ಸ್‌ನಲ್ಲಿ ಆಡಲು ಅವಕಾಶ ಮಾಡಿಕೊಡಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳಾ ಮತ್ತು ಪುರುಷ ಸೇರಿ ಒಟ್ಟು 16 ಟೇಬಲ್ ಟೆನಿಸ್ ತಂಡಗಳು ಸ್ಪರ್ಧಿಸಲಿವೆ.
ಒಲಿಂಪಿಕ್ಸ್ ಗೇಮ್ಸ್ನಲ್ಲಿ ಸ್ಥಾನ ಪಡೆಯಲು ನಡೆಸಲಾದ ಅರ್ಹತಾ ಪಂದ್ಯಗಳಲ್ಲಿ ಅರ್ಹತೆ ಪಡೆಯದ ಅತ್ಯುನ್ನತ ಶ್ರೇಣಿಯ ತಂಡಗಳನ್ನು ಅವುಗಳ ಶ್ರೇಯಾಂಕದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಭಾರತೀಯ ಮಹಿಳಾ ತಂಡದ ಜೊತೆಗೆ ಥಾಯ್ಲೆಂಡ್ (11), ಪೋಲೆಂಡ್ (12) ಮತ್ತು ಸ್ವೀಡನ್ (15) ಸ್ಥಾನ ಪಡೆದರೆ, ಪುರುಷರ ವಿಭಾಗದಲ್ಲಿ ಕ್ರೊವೇಷಿಯಾ (12) ಮತ್ತು ಸ್ಲೊವೇನಿಯಾ (11) ಶ್ರೇಯಾಂಕದಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.
ಕಳೆದ ತಿಂಗಳು ನಡೆದ ಟೇಬಲ್ ಟೆನಿಸ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್ಸ್ ಕೂಟದಲ್ಲಿ ಭಾರತೀಯ ಇತ್ತಂಡಗಳು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಗಿದ್ದವು. ಇದರಿಂದ ಒಲಿಂಪಿಕ್ಸ್‌ಗೆ ನೇರ ಅರ್ಹತೆಯಿಂದ ತಪ್ಪಿಸಿಕೊಂಡಿದ್ದವು.
ಇದನ್ನೂ ಓದಿ: ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿ; ಗೆಲುವಿನಿ ನಿರೀಕ್ಷೆಯಲ್ಲಿ ಸಾತ್ವಿಕ್-ಚಿರಾಗ್ ಜೋಡಿ