IPL Unsold Players: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ನ ಮೆಗಾ ಹರಾಜು ಇತ್ತೀಚೆಗೆ ಮುಕ್ತಾಯಗೊಂಡಿತ್ತು. ಹರಾಜಿನಲ್ಲಿ ಎಲ್ಲಾ ತಂಡಗಳು 182ಕ್ಕೂ ಹೆಚ್ಚು ಆಟಗಾರರನ್ನು ಖರೀದಿಸಿವೆ. ಆದಾಗ್ಯೂ, ಹಲವಾರು ಸ್ಟಾರ್ ಆಟಗಾರರು ಹರಾಜಿನಲ್ಲಿ ಮಾರಾಟವಾಗದೇ ಇರುವುದು ಅಚ್ಚರಿ ಮೂಡಿಸಿತ್ತು. ಇದೀಗ ನೆರೆಯ ಪಾಕಿಸ್ತಾನ ಐಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾಗದೇ ಉಳಿದಿರುವ ಆಟಗಾರರ ಮೇಲೆ ಕಣ್ಣು ಹಾಕಿದೆ.
ಮುಂದಿನ ವರ್ಷ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಐಪಿಎಲ್ ನಡೆಯುವ ಸಂದರ್ಭದಲ್ಲೇ ಪಾಕಿಸ್ತಾನ ಸೂಪರ್ ಲೀಗ್ ನಡೆಸಲು ಪಾಕ್ ಕ್ರಿಕೆಟ್ ಮಂಡಳಿ ಮುಂದಾಗಿದೆ. ಇದಕ್ಕಾಗಿ IPL ಹರಾಜಿನಲ್ಲಿ ಬಿಕರಿಯಾಗದೆ ಉಳಿದಿರುವ ಸ್ಟಾರ್ ಆಟಗಾರ ಮೇಲೆ ಪಿಎಸ್ಎಲ್ ಫ್ರಾಂಚೈಸಿಗಳು ಚಿತ್ತ ಹರಿಸಿವೆ. ಈ ಆಟಗಾರರನ್ನು ಪಿಎಸ್ಎಲ್ ಭಾಗವನ್ನಾಗಿಸಲು ಮುಂದಾಗಿವೆ. ಇದಕ್ಕಾಗಿ ಫ್ರಾಂಚೈಸಿಗಳು ಸ್ಟಾರ್ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಪಿಎಸ್ಎಲ್ ಮಂಡಳಿಗೆ ಕಳುಹಿಸಿವೆ.
ಜಾನಿ ಬೈರ್‌ಸ್ಟೋವ್, ಕೇನ್ ವಿಲಿಯಮ್ಸನ್, ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್, ಕೇಶವ್ ಮಹಾರಾಜ್, ಅಲೆಕ್ಸ್ ಕ್ಯಾರಿ, ಅಕಿಲ್ ಹುಸೇನ್, ಡೇವಿಡ್ ವಾರ್ನರ್, ಆದಿಲ್ ರಶೀದ್, ಅಲೆಕ್ಸ್ ಕ್ಯಾರಿ, ಶಾಯ್ ಹೋಪ್, ಡ್ಯಾರೆಲ್ ಮಿಚೆಲ್, ಡೊನೊವನ್ ಫೆರಾರಾ ಸೇರಿದಂತೆ ಹಲವಾರು ವಿದೇಶಿ ಆಟಗಾರರನ್ನು ಖರೀದಿಸಲು ಪಾಕ್ ಸೂಪರ್ ಲೀಗ್ ಫ್ರಾಂಚೈಸಿಗಳು ಮುಂದಾಗಿವೆ ಎಂದು ವರದಿಯಾಗಿದೆ.
ಈ ಬಾರಿ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಐಪಿಎಲ್ ಮೆಗಾ ಹರಾಜು ನಡೆದಿತ್ತು. ಒಟ್ಟು 1,574 ಆಟಗಾರರು ನೋಂದಣಿ ಮಾಡಿಕೊಂಡಿದ್ದರು. 574 ಆಟಗಾರರ ಹೆಸರು ಶಾರ್ಟ್ ಲಿಸ್ಟ್ ಆಗಿತ್ತು. ಇದರಲ್ಲಿ ಎಲ್ಲಾ 10 ಫ್ರಾಂಚೈಸಿಗಳು 182 ಆಟಗಾರರನ್ನು 639 ಕೋಟಿ ರೂ.ಗೂ ಹೆಚ್ಚಿನ ಮೊತ್ತಕ್ಕೆ ಖರೀದಿಸಿವೆ. ಹರಾಜಿನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರರಲ್ಲಿ ರಿಷಭ್ ಪಂತ್ ಅಗ್ರಸ್ಥಾನದಲ್ಲಿದ್ದಾರೆ. ಇವರು 27 ಕೋಟಿ ರೂ.ಗೆ ಮಾರಾಟವಾಗಿ ದಾಖಲೆ ಬರೆದರು.
ಇದನ್ನೂ ಓದಿ: ಶ್ರೀಲಂಕಾ ವಿರುದ್ದ 2ನೇ ಟೆಸ್ಟ್ ಗೆದ್ದ ದ.ಆಫ್ರಿಕಾ: WTC ಅಂಕಪಟ್ಟಿಯಲ್ಲಿ ದೊಡ್ಡ ಬದಲಾವಣೆ; ಭಾರತಕ್ಕೆ ಸಂಕಷ್ಟ