ಕರಾಚಿ, ಪಾಕಿಸ್ತಾನ: ಮುಂದಿನ ವರ್ಷದ ಫೆಬ್ರವರಿ-ಮಾರ್ಚ್ನಲ್ಲಿ ನಡೆಯಬೇಕಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯಲು ನಿರ್ಧರಿಸಿದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ದೊಡ್ಡ ಪ್ರಮಾಣದ ಆರ್ಥಿಕ ನಷ್ಟ ಎದುರಾಗಲಿದೆ. ಅಲ್ಲದೇ ಕಾನೂನು ಮೊಕದ್ದಮೆಗಳು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಿಷ್ಕಾರವನ್ನು ಕೂಡ ಪಿಸಿಬಿ ಎದುರಿಸಬೇಕಾಗುತ್ತದೆ. 50 ಓವರ್ ಮಾದರಿಯ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಯಾವ ವಿಧಾನದಲ್ಲಿ ನಡೆಸಬೇಕು ಎಂಬ ವಿಚಾರದಲ್ಲಿ ಸದ್ಯ ಬಿಕ್ಕಟ್ಟು ಏರ್ಪಟ್ಟಿದೆ.
ಐಸಿಸಿ ಮತ್ತು ಬಿಸಿಸಿಐ ಹೈಬ್ರಿಡ್ ಮಾದರಿಯನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳದಿದ್ದರೆ ಪಂದ್ಯಾವಳಿಯಿಂದ ಹಿಂದೆ ಸರಿಯುವುದು ಪಿಸಿಬಿಗೆ ಸುಲಭದ ನಿರ್ಧಾರವಾಗಿರುವುದಿಲ್ಲ ಎಂದು ಐಸಿಸಿ ಈವೆಂಟ್ಗಳ ಆಯೋಜನೆಯ ಬಗ್ಗೆ ಚೆನ್ನಾಗಿ ತಿಳಿದಿರುವ ಹಿರಿಯ ಕ್ರಿಕೆಟ್ ಆಡಳಿತಗಾರರೊಬ್ಬರು ಬುಧವಾರ ಪಿಟಿಐಗೆ ತಿಳಿಸಿದ್ದಾರೆ.
ಆಡಳಿತಾಧಿಕಾರಿ ವಿವರಿಸಿದ್ದು ಹೀಗೆ: "ಪಾಕಿಸ್ತಾನವು ಐಸಿಸಿಯೊಂದಿಗೆ ಆತಿಥ್ಯ ಒಪ್ಪಂದಕ್ಕೆ ಸಹಿ ಹಾಕಿರುವುದು ಮಾತ್ರವಲ್ಲದೇ, ಈವೆಂಟ್ನಲ್ಲಿ ಭಾಗವಹಿಸುವ ಇತರ ಎಲ್ಲ ರಾಷ್ಟ್ರಗಳಂತೆ, ಐಸಿಸಿಯೊಂದಿಗೆ ಕಡ್ಡಾಯ ಸದಸ್ಯರ ಭಾಗವಹಿಸುವಿಕೆ ಒಪ್ಪಂದಕ್ಕೆ (ಎಂಪಿಎ) ಕೂಡ ಸಹಿ ಹಾಕಿದೆ ಎಂದು ಆಡಳಿತಾಧಿಕಾರಿ ವಿವರಿಸಿದರು.
ಸದಸ್ಯ ರಾಷ್ಟ್ರವು ಐಸಿಸಿ ಈವೆಂಟ್ನಲ್ಲಿ ಆಡಲು ಎಂಪಿಎಗೆ ಸಹಿ ಹಾಕಿದ ನಂತರವೇ ಅದು ಐಸಿಸಿ ಈವೆಂಟ್ಗಳಿಂದ ಗಳಿಸಿದ ಆದಾಯದ ಪಾಲನ್ನು ಪಡೆಯಲು ಅರ್ಹವಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಐಸಿಸಿ ತನ್ನ ಎಲ್ಲ ಕಾರ್ಯಕ್ರಮಗಳ ಪ್ರಸಾರ ಒಪ್ಪಂದಕ್ಕೆ ಸಹಿ ಹಾಕಿದಾಗ, ಐಸಿಸಿಯ ಎಲ್ಲ ಸದಸ್ಯರು ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ತನ್ನ ಎಲ್ಲಾ ಪಂದ್ಯಾವಳಿಗಳಲ್ಲಿ ಆಡಲು ಲಭ್ಯವಿರುತ್ತಾರೆ ಎಂಬ ಖಾತರಿಯನ್ನು ಪಡೆದುಕೊಂಡಿರುತ್ತದೆ ಎಂದು ಅವರು ಹೇಳಿದರು.
ಹೈಬ್ರಿಡ್ ಮಾದರಿಯಲ್ಲಿ ಈವೆಂಟ್ ನಡೆಸಲು ಒಮ್ಮತಕ್ಕೆ ಬಂದಿವೆ: ಕಳೆದ ವಾರ, ಐಸಿಸಿ ಎಂಟು ತಂಡಗಳ ಸ್ಪರ್ಧೆಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಒಮ್ಮತಕ್ಕೆ ಬಂದಿದೆ. ಈ ಮೂಲಕ ಭಾರತವು ತನ್ನ ಪಾಲಿನ ಪಂದ್ಯಗಳನ್ನು ದುಬೈನಲ್ಲಿ ಆಡಲು ಅವಕಾಶ ಸಿಗಲಿದೆ. ಅಲ್ಲದೆ 2027 ರವರೆಗೆ ಬಹುಪಕ್ಷೀಯ ಸ್ಪರ್ಧೆಗಳಲ್ಲಿ ಇದೇ ರೀತಿಯ ವ್ಯವಸ್ಥೆಗೆ ತಾತ್ವಿಕವಾಗಿ ಐಸಿಸಿ ಒಪ್ಪಿಕೊಂಡಿದೆ. ಆದಾಗ್ಯೂ, ಈ ಬಗೆಗಿನ ಔಪಚಾರಿಕ ಪ್ರಕಟಣೆಗಾಗಿ ಕಾಯಲಾಗುತ್ತಿದೆ.
ಈ ಒಪ್ಪಂದದ ಪ್ರಕಾರ 2027ರ ತನಕ ಪಾಕಿಸ್ತಾನ ಐಸಿಸಿ ಟೂರ್ನಿಗಳಿಗಾಗಿ ಭಾರತಕ್ಕೆ ಪ್ರಯಾಣಿಸುವುದು ಕಡ್ಡಾಯವಾಗಿರುವುದಿಲ್ಲ. ಪ್ರಸಾರ ಒಪ್ಪಂದದ ಭಾಗವಾಗಿ, ಎಲ್ಲ ಐಸಿಸಿ ಪಂದ್ಯಾವಳಿಗಳಲ್ಲಿ ಕನಿಷ್ಠ ಒಂದು ಭಾರತ - ಪಾಕಿಸ್ತಾನ ಪಂದ್ಯವನ್ನು ನಿಗದಿಪಡಿಸಲೇಬೇಕು ಎಂದು ಆಡಳಿತಾಧಿಕಾರಿ ಹೇಳಿದರು. ಎಲ್ಲ ದೇಶಗಳನ್ನು ಒಳಗೊಂಡ ಎಲ್ಲ ಪಂದ್ಯಗಳ ಮೌಲ್ಯವನ್ನು ಲೆಕ್ಕಹಾಕಿದ ನಂತರವೇ ಪ್ರಸಾರಕರು ಐಸಿಸಿಯೊಂದಿಗೆ ದೀರ್ಘಕಾಲೀನ ಒಪ್ಪಂದಕ್ಕಾಗಿ ಅಂದಾಜು ಬಿಡ್ ಮಾಡಿರುತ್ತಾರೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಜಯ್ ಶಾ ICC ಅಧ್ಯಕ್ಷರಾಗ್ತಿದ್ದಂತೆ ಈ ದೇಶದ ಕ್ರಿಕೆಟ್ ಲೀಗ್ ಬ್ಯಾನ್!