ಹೈದರಾಬಾದ್: ಖ್ಯಾತ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಭಾರತೀಯ ಅಥ್ಲೀಟ್‌ಗಳಾದ ಮನು ಭಾಕರ್ ಮತ್ತು ನೀರಜ್ ಚೋಪ್ರಾ, ಹಾಕಿ ಗೋಲ್ ಕೀಪರ್ ಶ್ರೀಜೇಶ್ ಅವರಿಗೆ ತಮ್ಮ ಹೆಸರಿನ ಮುಂದೆ ಐಫೆಲ್ ಟವರ್ ಸ್ಟಿಕ್ಕರ್ ನೀಡಿ ವಿಶೇಷವಾಗಿ ಸನ್ಮಾನಿಸಲಾಗಿದೆ.
ಭಾನುವಾರ ರಾತ್ರಿ ನಡೆದ ಒಲಿಂಪಿಕ್ ಸಮಾರೋಪ ಸಮಾರಂಭದ ಬಳಿಕ ಈ ಇಬ್ಬರು ಭಾರತೀಯ ಅಥ್ಲೀಟ್ಗಳ ಖಾತೆ ಮುಂದೆ ಐಫೆಲ್ ಟವರ್ ಸ್ಟಿಕ್ಕರ್ ಸೇರಿಸಲಾಗಿದೆ. ಮುನು ಭಾಕರ್ ಮತ್ತು ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ನ ಪದಕ ವಿಜೇತರಾಗಿದ್ದಾರೆ.
ಭಾಕರ್ ಅವರು ಪ್ಯಾರಿಸ್ ಒಲಿಂಪಿಕ್ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಮತ್ತು ಮಿಶ್ರ ತಂಡ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಒಲಿಂಪಿಕ್ ಒಂದರಲ್ಲೇ ಎರಡು ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ದಾಖಲೆಯನ್ನು ಬರೆದಿದ್ದಾರೆ.
ಏತನ್ಮಧ್ಯೆ, ಟೋಕಿಯೊ ಒಲಿಂಪಿಕ್ನಲ್ಲಿ ಚಿನ್ನದ ಪದಕ ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಜತೆಗೆ ಈ ಒಲಿಂಪಿಕ್ ನಲ್ಲಿ ಬೆಳ್ಳಿ ಪದಕ ಗೆದ್ದ ಏಕೈಕ ಭಾರತೀಯ ಅಥ್ಲೀಟ್ ಆಗಿದ್ದಾರೆ. ಜಾವೆಲಿನ್ ಎಸೆತದ ಫೈನಲ್‌ನಲ್ಲಿ ಅವರು ತಮ್ಮ ಎರಡನೇ ಪ್ರಯತ್ನದಲ್ಲಿ 89.45 ದೂರಕ್ಕೆ ಭರ್ಚಿ ಎಸೆದು ಪದಕ ಮುಡಿಗೇರಿಸಿಕೊಂಡರು. ಇದನ್ನು ಹೊರತುಪಡಿಸಿ, ಅವರ ಇತರ 5 ಎಸೆತಗಳು ಪೌಲ್ ಆಗಿದ್ದವು. ಈ ಈವೆಂಟ್ನಲ್ಲಿ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ 92.97 ಮೀಟರ್ ದೂರಕ್ಕೆ ಭರ್ಚಿ ಎಸೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಒಲಿಂಪಿಕ್ಸ್ನಲ್ಲಿ ಭಾರತ ಹಾಕಿ ತಂಡದ ಗೋಲ್ ಕೀಪರ್ ಆಗಿ ತಂಡದ ಗೆಲುವಿಗೆ ಕೊಡುಗೆ ನೀಡಿದ ಶ್ರೀಜೇಶ್ ಅವರ ಎಕ್ಸ್ ಖಾತೆಗೂ ಐಫೆಲ್ ಟವರ್ ಸ್ಟಿಕ್ಕರ ಸೇರಿಲಸಾಗಿದೆ.
ಈ ಬಾರಿಯ ಒಲಿಂಪಿಕ್ ನಲ್ಲಿ 117 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಿದ್ದರು. ಈ ಪೈಕಿ ಮನು ಭಾಕರ್, ಸರಬ್ಜೋತ್ ಸಿಂಗ್, ಸ್ವಪನೀಲ್ ಕುಸಾಲೆ, ನೀರಜ್ ಚೋಪ್ರಾ ಮತ್ತು ಭಾರತ ಹಾಕಿ ತಂಡ ಮಾತ್ರ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಉಳಿದ ಆಟಗಾರರು ಉತ್ತಮ ಪ್ರದರ್ಶನ ತೋರಿದರಾದರೂ ಅಂತಿಮ ಹಂತದಲ್ಲಿ ಎಡವಿ ಪದಕವಿಲ್ಲದೇ ಖಾಲಿ ಕೈಯೊಂದಿಗೆ ಸ್ವದೇಶಕ್ಕೆ ಮರಳಿದ್ದಾರೆ. ಒಟ್ಟಾರೆ ಈ ಬಾರಿ ಭಾರತ 6 ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ 5 ಕಂಚು ಮತ್ತು ಒಂದು ಬೆಳ್ಳಿ ಪದಕ ಸೇರಿದೆ. ಆದ್ರೆ ಚಿನ್ನ ಮಾತ್ರ ಭಾರತದ ಖಾತೆಗೆ ಸೇರ್ಪಡೆಯಾಗಲಿಲ್ಲ.