ಬೆಂಗಳೂರು: ನಾಯಕ ಕರುಣ್ ನಾಯರ್ ಮತ್ತು ಎಸ್.ಯು.ಕಾರ್ತಿಕ್ ಅವರ ಅರ್ಧಶತಕಗಳ ನೆರವಿನಿಂದ ಮೈಸೂರು ವಾರಿಯರ್ಸ್ ತಂಡ ಭಾನುವಾರ ಇಲ್ಲಿ ನಡೆದ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮೂರನೇ ಆವೃತ್ತಿಯ ಅಂತಿಮ ಹಣಾಹಣಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 45 ರನ್‌ಗಳ ಜಯದೊಂದಿಗೆ ಪ್ರಶಸ್ತಿ ಗೆದ್ದುಕೊಂಡಿತು.
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್ ನಾಯಕ ಮಯಾಂಕ್ ಅಗರ್ವಾಲ್ ಮೊದಲು ಕ್ಷೇತ್ರ ರಕ್ಷಣೆ ಮಾಡುವ ನಿರ್ಧಾರ ಕೈಗೊಂಡರು. ಬ್ಯಾಟಿಂಗ್ಗಿಳಿದ ಮೈಸೂರು ವಾರಿಯರ್ಸ್, 29 ರನ್ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಕಾರ್ತಿಕ್ ಸಿ.ಎ. 3 ರನ್ಗೆ ಔಟಾದರು. ಆದರೆ ಬಳಿಕ ಒಂದಾದ ಎಸ್.ಯು.ಕಾರ್ತಿಕ್ (44 ಎಸೆತಗಳಲ್ಲಿ 71 ರನ್) ಹಾಗೂ ನಾಯಕ ಕರುಣ್ ನಾಯರ್ (45 ಎಸೆತಗಳಲ್ಲಿ 66 ರನ್) ಭರ್ಜರಿ ಆಟವಾಡಿದರು. ಈ ಜೋಡಿ ಎರಡನೇ ವಿಕೆಟ್ಗೆ 81 ರನ್ ಸೇರಿಸಿತು.
𝐁𝐞𝐡𝐨𝐥𝐝 𝐭𝐡𝐞 𝐌𝐚𝐡𝐚𝐫𝐚𝐣𝐚𝐬 𝐨𝐟 𝐊𝐚𝐫𝐧𝐚𝐭𝐚𝐤𝐚—𝐓𝐡𝐞 𝐌𝐲𝐬𝐨𝐫𝐞 𝐖𝐚𝐫𝐫𝐢𝐨𝐫𝐬! 👑🔥#ಇಲ್ಲಿಗೆದ್ದವರೇರಾಜ #ShriramCapitalMaharajaTrophy #MaharajaTrophy #Season3 pic.twitter.com/hKQe9qmIDU
— Maharaja Trophy T20 (@maharaja_t20) September 1, 2024
ಕಾರ್ತಿಕ್ ಔಟಾದ ಬಳಿಕ ಅಬ್ಬರದ ಬ್ಯಾಟಿಂಗ್ ತೋರಿದ ಕರುಣ್ ನಾಯರ್ (66), ಅರ್ಧಶತಕ ಬಾರಿಸಿ ಮಿಂಚಿದರು. ಕೊನೆಯ ಹಂತದಲ್ಲಿ ಅಬ್ಬರಿಸಿದ ಮನೋಜ್ ಭಾಂಡಗೆ 13 ಎಸೆತಗಳಲ್ಲಿ 44 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು 200 ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ, ಮೈಸೂರು ವಾರಿಯರ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಮೊತ್ತ ಕಲೆ ಹಾಕಿತು.
ಬೆಂಗಳೂರು ಬ್ಲಾಸ್ಟರ್ಸ್ ವೈಫಲ್ಯ: 208 ರನ್‌ಗಳ ಗುರಿ ಬೆನ್ನಟ್ಟಿದ ಬೆಂಗಳೂರು ಬ್ಲಾಸ್ಟರ್ಸ್ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. 26 ರನ್ ಆಗುವಷ್ಟರಲ್ಲಿ ನಾಯಕ ಮಯಾಂಕ್ (6) ಪ್ರಮುಖ ಸೇರಿ ಮೂವರು ಬ್ಯಾಟರ್ಗಳು ಪೆವಿಲಿಯನ್ ಸೇರಿದರು. ಈ ಹಂತದಲ್ಲಿ ಆರಂಭಿಕ ಆಟಗಾರ ಎಲ್.ಆರ್.ಚೇತನ್ ಕೊಂಚ ಹೋರಾಟ ಪ್ರದರ್ಶಿಸಿ, ಅರ್ಧಶತಕ (51) ಬಾರಿಸಿದರೂ ಸಾಕಾಗಲಿಲ್ಲ.
ಅಂತಿಮ ಹಂತದಲ್ಲಿ ಅನಿರುದ್ಧ್ ಜೋಶಿ 18 ರನ್, ಕ್ರಾಂತಿ ಕುಮಾರ್ 39 ಹಾಗೂ ನವೀನ್ ಎಂ.ಜಿ. 17 ರನ್ ಗಳಿಸಿದರೂ ಸಹ ತಂಡವನ್ನು ಗೆಲುವಿನ ಸಮೀಪ ಕೊಂಡೊಯ್ಯಲಾಗಲಿಲ್ಲ. ತಂಡದ ಐವರು ಅಗ್ರ ಬ್ಯಾಟರ್ಗಳು ಎರಡಂಕಿ ಮೊತ್ತವನ್ನೂ ತಲುಪದೇ ನಿರಾಸೆ ಮೂಡಿಸಿದರು. 20 ಓವರ್‌ಗಳಲ್ಲಿ 8 ವಿಕೆಟ್ಗೆ 162 ರನ್ ಮಾತ್ರ ಗಳಿಸಲು ಶಕ್ತವಾದ ಬೆಂಗಳೂರು ಬ್ಲಾಸ್ಟರ್ಸ್, 45 ರನ್‌ಗಳ ಸೋಲಿನೊಂದಿಗೆ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡಿತು. ಮೈಸೂರು ವಾರಿಯರ್ಸ್ ಪರ ವಿದ್ಯಾಧರ್ ಪಾಟೀಲ್ 19ಕ್ಕೆ 3 ಹಾಗೂ ಕೆ.ಗೌತಮ್ 23ಕ್ಕೆ 2 ವಿಕೆಟ್ ಕಬಳಿಸಿದರು.
The Mysore Warriors have done it! They’ve claimed the title in a thrilling grand finale, putting to rest the heartbreak of last season. 🔥👑#ಇಲ್ಲಿಗೆದ್ದವರೇರಾಜ #ShriramCapitalMaharajaTrophy #MaharajaTrophy #Season3@StarSportsKan pic.twitter.com/mz9GJKnDih
— Maharaja Trophy T20 (@maharaja_t20) September 1, 2024
ಬ್ಯಾಟಿಂಗ್ನಲ್ಲಿ ಮಿಂಚಿದ ಎಸ್.ಯು.ಕಾರ್ತಿಕ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಕರುಣ್ ನಾಯರ್ ಪ್ಲೇಯರ್ ಆಫ್ ದಿ ಸಿರೀಸ್ ಗೌರವಕ್ಕೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್: ಮೈಸೂರು ವಾರಿಯರ್ಸ್: 20 ಓವರ್‌ಗಳಲ್ಲಿ 207/4 (ಎಸ್.ಯು.ಕಾರ್ತಿಕ್ 71, ಕರುಣ್ ನಾಯರ್ 66, ಮನೋಜ್ ಭಾಂಡಗೆ ಔಟಾಗದೆ 44 ರನ್)
ಬೆಂಗಳೂರು ಬ್ಲಾಸ್ಟರ್ಸ್: 20 ಓವರ್‌ಗಳಲ್ಲಿ 162/8 (ಎಲ್.ಆರ್.ಚೇತನ್ 51 ರನ್; ವಿದ್ಯಾಧರ್ ಪಾಟೀಲ್ 19ಕ್ಕೆ 3, ಕೆ.ಗೌತಮ್ 23ಕ್ಕೆ 2 ವಿಕೆಟ್).
ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೆರಡು ಪದಕ; ನಿಶದ್ ಕುಮಾರ್‌ಗೆ ಬೆಳ್ಳಿ, ಪ್ರೀತಿ ಪಾಲ್‌ಗೆ ಕಂಚು - Paralympics 2024