ಮುಂಬೈ: ನಾಯಕತ್ವ ಗೋಜಲಿನಲ್ಲಿ ಸಿಲುಕಿ ನಲುಗುತ್ತಿರುವ ಮುಂಬೈ ಇಂಡಿಯನ್ಸ್ ಇಲ್ಲಿ ನಡೆಯುತ್ತಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಟ್ರೆಂಟ್ ಬೌಲ್ಟ್, ಯಜುವೇಂದ್ರ ಚಹಲ್ ಮತ್ತು ನಂಡ್ರೆ ಬರ್ಗರ್ ದಾಳಿಗೆ ಸಿಲುಕಿ 9 ವಿಕೆಟ್ಗೆ 125 ರನ್ ಗಳಿಸಲಷ್ಟೇ ಶಕ್ತವಾಗಿದೆ.
ನಿರ್ಗಮಿತ ನಾಯಕ ರೋಹಿತ್ ಶರ್ಮಾ ಟ್ರೆಂಟ್ ಬೌಲ್ಟ್ ಎಸೆದ ಮೊದಲ ಓವರ್ನ 5ನೇ ಬಾಲ್ನಲ್ಲಿ ಸೊನ್ನೆಗೆ ಔಟಾದರು. ಮರು ಎಸೆತದಲ್ಲೇ ನಮನ್ ಧಿರ್ ಕೂಡ ವಿಕೆಟ್ ನೀಡಿದರು. ಡೆವಾಲ್ಡ್ ಬ್ರೇವಿಸ್ ಕೂಡ ಬೌಲ್ಟ್ಗೆ ವಿಕೆಟ್ ಕೊಟ್ಟು ಮೂವರು ಬ್ಯಾಟರ್ಗಳು ಸೊನ್ನೆ ಸುತ್ತಿದರು.
16 ರನ್ ಗಳಿಸಿದ್ದ ಇಶಾನ್ ಕಿಶನ್ ಬರ್ಗರ್ಗೆ ವಿಕೆಟ್ ಅರ್ಪಿಸಿದರು. ಇದರಿಂದ ತಂಡ 20 ರನ್ಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಐಪಿಎಲ್ನಲ್ಲಿ 2ನೇ ಬಾರಿಗೆ ಅತಿ ಕೆಟ್ಟ ಆರಂಭ ಕಂಡಿತು. ಆರ್ಸಿಬಿ ವಿರುದ್ಧ 7 ರನ್ಗೆ 4 ವಿಕೆಟ್ ಕಳೆದುಕೊಂಡಿತ್ತು.
ತಿಲಕ್-ಪಾಂಡ್ಯ ಅಲ್ಪ ನೆರವು: ತೀವ್ರ ಸಂಕಷ್ಟದಲ್ಲಿದ್ದ ತಂಡವನ್ನು ತಿಲಕ್ ವರ್ಮಾ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಮೇಲೆತ್ತಲು ಪ್ರಯತ್ನಿಸಿದರು. ವರ್ಮಾ ನಿಧಾನವಾಗಿ ಬ್ಯಾಟ್ ಮಾಡಿ 29 ಎಸೆತಗಳಲ್ಲಿ 32 ರನ್ ಗಳಿಸಿದರೆ, ಪಾಂಡ್ಯ ತುಸು ಅಬ್ಬರಿಸಿ 21 ಎಸೆತದಲ್ಲಿ 34 ರನ್ ಮಾಡಿದರು. ಇಬ್ಬರೂ ಯಜುವೇಂದ್ರ ಚಹಲ್ಗೆ ವಿಕೆಟ್ ನೀಡಿ ನಿರ್ಗಮಿಸಿದರು. ಬಳಿಕ ಮತ್ತೆ ತಂಡ ಕುಸಿತ ಕಂಡಿತು. ಕೊನೆಯಲ್ಲಿ ಟಿಮ್ ಡೇವಿಡ್ 17 ರನ್ ಗಳಿಸಿದರು. ತೀವ್ರ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ತಂಡ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು.
ರಾಯಲ್ ಬೌಲಿಂಗ್: ಮೊದಲ ಓವರ್ನಲ್ಲೇ ಮುಂಬೈ ತಂಡದ ಕುಸಿತಕ್ಕೆ ನಾಂದಿ ಹಾಡಿದ ಟ್ರೆಂಟ್ ಬೌಲ್ಟ್ 3 ವಿಕೆಟ್ ಪಡೆದರೆ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಪಡೆಯನ್ನು ಯಜುವೇಂದ್ರ ಚಹಲ್ ಪೆವಿಲಿಯನ್ಗೆ ಸೇರಿಸಿ ಮೂರು ಕಬಳಿಸಿದರು. ನಂಡ್ರೆ ಬರ್ಗರ್ 2, ಆವೇಶ್ ಖಾನ್ 1 ವಿಕೆಟ್ ಸಾಧನೆ ಮಾಡಿದರು.
ಪಾಂಡ್ಯ ಬೆಂಬಿಡದ ರೋಹಿತ್ ಫ್ಯಾನ್ಸ್: ಟಾಸ್ಗೆಂದು ಮೈದಾನಕ್ಕೆ ಬಂದ ನಾಯಕ ಹಾರ್ದಿಕ್ ಪಾಂಡ್ಯರನ್ನು ಮುಂಬೈ ತಂಡದ ಅಭಿಮಾನಿಗಳು ಮತ್ತೆ ಕಿಚಾಯಿಸಿದರು. ಇಡೀ ಕ್ರೀಡಾಂಗಣದಲ್ಲಿ ದೊಡ್ಡ ಸದ್ದು ಮಾಡುವ ಮೂಲಕ ರೋಹಿತ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದರು. ಅಲ್ಲದೇ ಪಂದ್ಯ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾರ ಹೆಸರನ್ನು ಕೂಗುವ ಮೂಲಕ ಹುರಿದುಂಬಿಸಿದರು.
ನಾಯಕತ್ವ ಬದಲಾವಣೆ ಬಳಿಕ ಹಾರ್ದಿಕ್ ಅಭಿಮಾನಿಗಳ ಟೀಕೆಗೆ ಗುರಿಯಾಗುತ್ತಲೇ ಇದ್ದಾರೆ. ಕ್ರೀಡಾಂಗಣದಲ್ಲಿನ ಫ್ಯಾನ್ಸ್ ಪಾಂಡ್ಯ ವಿರುದ್ಧ ದೊಡ್ಡ ಸದ್ದು ಮಾಡಿದಾಗ ಕಾಮೆಂಟರ್ ಸಂಜಯ್ ಮಂಜ್ರೇಕರ್ ಅವರು ಅಭಿಮಾನಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಈ ನಡೆ ಒಳ್ಳೆಯದಲ್ಲ ಎಂದು ಹೇಳಿದರು.
ಇದನ್ನೂ ಓದಿ: ಟಿ-20 ಮಾದರಿಯಲ್ಲಿ ಮತ್ತೊಂದು ದಾಖಲೆ ಬರೆದ ಧೋನಿ - MS Dhoni T20s Records