ಲಂಡನ್: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಾಯಕನಾಗಿರುತ್ತಿದ್ದರೆ ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲುತ್ತಿರಲಿಲ್ಲ. ರೋಹಿತ್ ಶರ್ಮಾ ಆಟದ ಸಮಯದಲ್ಲಿ ಸಂಪೂರ್ಣವಾಗಿ 'ಸ್ವಿಚ್ ಆಫ್' ಆಗಿರುವಂತೆ ಕಂಡುಬಂತು ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಹೇಳಿದರು.
ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಭಾರತ 190 ರನ್ಗಳ ಮುನ್ನಡೆ ಸಾಧಿಸಿತ್ತು. ಆದರೆ ತಂಡದಲ್ಲಿ ವಿರಾಟ್ ಕೊಹ್ಲಿ ಇಲ್ಲದೇ ಇರುವ ಕಾರಣಕ್ಕೆ 28 ರನ್ಗಳಿಂದ ಸೋಲು ಅನುಭವಿಸಬೇಕಾಯಿತು. ಹೀಗಾಗಿ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಪಡೆದುಕೊಂಡಿದೆ. ವೈಯಕ್ತಿಕ ಕಾರಣಗಳಿಂದ ಕೊಹ್ಲಿ ಆರಂಭಿಕ ಮೊದಲೆರಡು ಪಂದ್ಯಗಳಿಂದ ದೂರ ಉಳಿದಿದ್ದಾರೆ. ಸದ್ಯದ ಭಾರತ ತಂಡ ಕೊಹ್ಲಿಯ ನಾಯಕತ್ವವನ್ನು ಕಳೆದುಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಅವರು ನಾಯಕತ್ವ ವಹಿಸಿದ್ದರೆ ಬಹುಶ: ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಕಳೆದುಕೊಳ್ಳುತ್ತಿರಲಿಲ್ಲ ಎಂದು ಸಂದರ್ಶನವೊಂದರಲ್ಲಿ ವಾನ್ ಅಭಿಪ್ರಾಯಪಟ್ಟರು.
ರೋಹಿತ್ ಶರ್ಮಾ ನಾಯಕತ್ವವನ್ನು ಟೀಕಿಸಿರುವ ವಾನ್, "ರೋಹಿತ್ ಶರ್ಮಾ ಒಬ್ಬ ಶ್ರೇಷ್ಠ ಆಟಗಾರ. ಆದರೆ ಅವರು ಪಂದ್ಯದಲ್ಲಿ ಸಂಪೂರ್ಣವಾಗಿ ಸ್ವಿಚ್ ಆಪ್ ಆಗುತ್ತಾರೆ ಎಂದೇ ನಾನು ಭಾವಿಸುತ್ತೇನೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕನಾಗಿ ಬ್ಯಾಟಿಂಗ್ ಇಳಿಯುವ ಮುನ್ನ ರೋಹಿತ್ ಶರ್ಮಾ ಪೂರ್ವ ತಯಾರಿ ನಡೆಸಿಲ್ಲ ಎಂಬುದು ಕಂಡುಬಂತು. ರೋಹಿತ್ ತಮ್ಮ ನಾಯಕತ್ವದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಲ್ಲ. ಬೌಲಿಂಗ್ ಬದಲಾವಣೆ ಮಾಡುವಲ್ಲೂ ಅವರು ಎಡವಿದ್ದಾರೆ. ಓಲಿ ಪೋಪ್ ಹೊಡೆಯುತ್ತಿದ್ದ ಸ್ವೀಪ್ ಶಾಟ್ಗಳಿಗೆ ಭಾರತದ ಬೌಲಿಂಗ್ನಲ್ಲಿ ಉತ್ತರವಿರಲಿಲ್ಲ" ಎಂದು ವಿಶ್ಲೇಷಿಸಿದರು.
2022ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದರು. ಈ ಸಮಯದಲ್ಲಿ ಟೀಮ್ ಇಂಡಿಯಾ ವಿಶ್ವ ನಂ.1 ಐಸಿಸಿ ಶ್ರೇಯಾಂಕ ತಲುಪಿತ್ತು.
ಇದನ್ನೂ ಓದಿ: ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ ಜಯ್ ಶಾ ಮರು ನೇಮಕ: ಒಂದು ವರ್ಷದ ವರೆಗೆ ಅಧಿಕಾರಾವಧಿ ವಿಸ್ತರಣೆ