ಮುಂಬೈ : ಏಪ್ರಿಲ್ 1 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ನಿಂದಿಸಿದರೆ ಅಭಿಮಾನಿಗಳ ವಿರುದ್ಧ ಉದ್ದೇಶಪೂರ್ವಕ ಕ್ರಮಗಳ ಬಗ್ಗೆ ಇದ್ದ ವದಂತಿಗಳನ್ನು ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ತಳ್ಳಿಹಾಕಿದೆ. ಈ ವದಂತಿಗಳು ಆಧಾರ ರಹಿತವಾಗಿದ್ದು, ಅಂತಹ ಯಾವುದೇ ನಿರ್ದೇಶನಗಳನ್ನು ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ಕಳೆದ ಎರಡು ವರ್ಷಗಳಿಂದ ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸುತ್ತಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈಗೆ ಕರೆ ತಂದು ರೋಹಿತ್ ಶರ್ಮಾ ಸ್ಥಾನಕ್ಕೆ ನಿಯೋಜನೆ ಮಾಡಲಾಗಿದೆ. ಈ ಎಲ್ಲ ಬೆಳವಣಿಗೆ ನಂತರ ಹಾರ್ದಿಕ್ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಂತೂ ನೆಟ್ಟಿಗರು ಹಾರ್ದಿಕ್ ಅವರನ್ನು ಒಂದಲ್ಲ ಒಂದು ವಿಚಾರದಿಂದ ಟ್ರೋಲ್ ಮಾಡುತ್ತಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ನಡುವಿನ ಮೊದಲ ಪಂದ್ಯದಲ್ಲಿ ಟಾಸ್ ವೇಳೆ ಮೈದಾನಕ್ಕೆ ಕಾಲಿಟ್ಟಾಗ ಪಾಂಡ್ಯ ಅವರನ್ನು 'ಫಿಕ್ಸರ್, ಫಿಕ್ಸರ್' ಮತ್ತು 'ಚಪ್ರಿ' ಎಂಬ ಘೋಷಣೆಗಳೊಂದಿಗೆ ತೀವ್ರವಾಗಿ ಟೀಕಿಸಿದರು.
ಭಾರತದಲ್ಲಿ ನಡೆದ 2023 ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಅವರು ತಮ್ಮ ನಾಯಕತ್ವದಲ್ಲೇ ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ನಲ್ಲಿನ ಸೋಲನ್ನು ಹೊರತುಪಡಿಸಿ, ಒಂಬತ್ತು ಲೀಗ್ ಪಂದ್ಯಗಳು ಮತ್ತು ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಸೇರಿದಂತೆ 10ಕ್ಕೆ ಹತ್ತು ಪಂದ್ಯಗಳನ್ನು ಗೆಲ್ಲಿಸಿ ಅದ್ಭುತ ಸಾಧನೆ ಮಾಡಿದ್ದರು. ಆದರೆ 36 ವರ್ಷದ ರೋಹಿತ್ ಅವರನ್ನು ಮುಂಬೈ ತಂಡದ ನಾಯಕತ್ವದಿಂದ ವಜಾಗೊಳಿಸಿರುವುದು ಅವರ ಅಭಿಮಾನಿಗಳಿಗೆ ಬಹಳ ನಿರಾಸೆ ಮೂಡಿಸಿದೆ. ಹಾರ್ದಿಕ್ ಪಾಂಡ್ಯ 2022 ರಲ್ಲಿ ಗುಜರಾತ್ಅನ್ನು ತಮ್ಮ ನಾಯಕತ್ವದಲ್ಲಿ ಚೊಚ್ಚಲ ಪ್ರಶಸ್ತಿಗೆ ಮುನ್ನಡೆಸಿದ್ದು, ಕಳೆದ ಋತುವಿನಲ್ಲಿ ರನ್ನರ್ ಅಪ್ ಮಾಡಿಸಿದ್ದರು.
ಇದನ್ನೂ ಓದಿ : ಗುಜರಾತ್ ಎದುರು ಮಂಕಾದ ಸನ್‌ರೈಸರ್ಸ್: ಗಿಲ್ ಪಡೆಗೆ 7 ವಿಕೆಟ್ ಗೆಲುವು - IPL 2024