ಹೈದರಾಬಾದ್: ಪ್ರಸ್ತುತ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳು ಕೇವಲ ಐದು ದಿನಗಳ ಕಾಲ ನಡೆಯುತ್ತಿದೆ. ಈ ಐದು ದಿನಗಳಲ್ಲಿ ಪಂದ್ಯದ ಫಲಿತಾಂಶವೇನು ಎಂಬುದು ಸ್ಪಷ್ಟವಾಗುತ್ತದೆ. ಆದರೆ ಕ್ರಿಕೆಟ್ ಆರಂಭದಲ್ಲಿ ಟೆಸ್ಟ್ ಪಂದ್ಯಗಳಿಗೆ ದಿನ, ಸಮಯದ ಮಿತಿ ಇರುತ್ತಿರಲಿಲ್ಲ. ಫಲಿತಾಂಶ ಬರುವವರೆಗೂ ತಂಡಗಳು ಕಾದಾಡಿ ಅಂತಿಮವಾಗಿ ಗೆಲುವು ಅಥವಾ ಸೋಲು ಎಂಬುದನ್ನು ಕಂಡುಕೊಳ್ಳುತ್ತಿದ್ದವು. ಆದರೆ, ಇಲ್ಲೊಂದು ಟೆಸ್ಟ್ ಪಂದ್ಯ 12 ದಿನಗಳ ನಡೆದರೂ ಅಂತಿಮವಾಗಿ ಬಂದ ಫಲಿತಾಂಶದ ಬಗ್ಗೆ ತಿಳಿದರೆ ಖಂಡಿತವಾಗಿಯೂ ನೀವು ಅಚ್ಚರಿಗೊಳ್ಳುತ್ತೀರಿ.
ಇದು ಟೈಮ್ ಲೆಸ್ ಟೆಸ್ಟ್: 85 ವರ್ಷಗಳ ಹಿಂದೆ ಅಂದ್ರೆ 1939ರಲ್ಲಿ, ಇಂಗ್ಲೆಂಡ್ ಕ್ರಿಕೆಟ್ ತಂಡ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ಮೊದಲ ಪಂದ್ಯ 1939ರ ಮಾರ್ಚ್ 3ರಿಂದ ಆರಂಭವಾಗಿ ಮಾ.14ರವರೆಗೆ ನಡೆಯಿತು. ಎರಡು ವಿಶ್ರಾಂತಿ ದಿನಗಳನ್ನು ಇದು ಒಳಗೊಂಡಿತ್ತು (ಮಾರ್ಚ್ 5 ಮತ್ತು 12). ಒಂದು ದಿನ (ಮಾರ್ಚ್ 11) ಮಳೆಯಿಂದಾಗಿ ಪಂದ್ಯ ರದ್ದಾಗಿತ್ತು. ಈ ಪಂದ್ಯದಲ್ಲಿ ಒಟ್ಟು 1,981 ರನ್ಗಳು ದಾಖಲಾಗಿದ್ದವು. 680 ಓವರ್ (5,447 ಎಸೆತಗಳು) ಬೌಲಿಂಗ್ ಮಾಡಲಾಗಿತ್ತು.
ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ತಂಡದ ಪರ ಪೀಟರ್ ವ್ಯಾನ್ ಡೆರ್ ಬಿಜ್ಲ್ (125) ಮತ್ತು ಡಡ್ಲಿ ನರ್ಸ್ (103) ಬ್ಯಾಟಿಂಗ್ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಆತಿಥೇಯರು 530 ರನ್ ಗಳಿಸಿದರು. ಆಂಗ್ಲ ಆಟಗಾರ ರೆಗ್ ಪರ್ಕ್ಸ್ 5 ವಿಕೆಟ್ ಪಡೆದರು. ಬಳಿಕ ಇಂಗ್ಲೆಂಡ್ 316 ರನ್‌ಗಳಿಗೆ ಆಲೌಟಾಯಿತು. ಲೆಸ್ ಏಮ್ಸ್ (84) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ದಕ್ಷಿಣ ಆಫ್ರಿಕಾದ ಲೆಗ್ ಸ್ಪಿನ್ನರ್ ಎರಿಕ್ ಡಾಲ್ಟನ್ 4 ವಿಕೆಟ್ ಪಡೆದರು. ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 214 ರನ್‌ಗಳ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ 481 ರನ್‌ಗಳಿಗೆ ಆಲೌಟಾಗಿತ್ತು. ನಾಯಕ ಅಲನ್ ಮೆಲ್ವಿಲ್ಲೆ (103) ಶತಕ ಗಳಿಸಿದರು. ಇಂಗ್ಲೆಂಡ್ ವೇಗಿ ಕೆನ್ ಫಾರ್ನೆಸ್ 4 ವಿಕೆಟ್ ಪಡೆದರು. ಇದರೊಂದಿಗೆ ದಕ್ಷಿಣ ಆಫ್ರಿಕಾ ಇಂಗ್ಲೆಂಡ್‌ಗೆ 696 ರನ್‌ಗಳ ಬೃಹತ್ ಗುರಿ ನೀಡಿತು.
ಇದಾದ ಬಳಿಕ ಇಂಗ್ಲೆಂಡ್ ಆರು ದಿನಗಳ ಕಾಲ ಬ್ಯಾಟಿಂಗ್ ಮಾಡಿ 5 ವಿಕೆಟ್ ನಷ್ಟಕ್ಕೆ 654 ರನ್ ಗಳಿಸಿತ್ತು. ಕೊನೆಗೆ ಈ ಗುರಿ ತಲುಪಲು ಕೇವಲ 42 ರನ್‌ಗಳ ಅಗತ್ಯವಿತ್ತು. ಇಂಗ್ಲೆಂಡ್ ಪರ ಬ್ಯಾಟರ್ ಬಿಲ್ ಎಡ್ರಿಚ್ ದ್ವಿಶತಕ ಗಳಿಸಿದರೆ, ಪಾಲ್ ಗಿಬ್ ಮತ್ತು ವಾಲಿ ಹ್ಯಾಮಂಡ್ ಶತಕ ಸಿಡಿಸಿದ್ದರು. ಫಲಿತಾಂಶ ಪ್ರಕಟವಾಗುವವರೆಗೂ ಪಂದ್ಯ ನಡೆಯಬೇಕು ಎಂದು ಉಭಯ ತಂಡಗಳ ನಡುವೆ ಒಪ್ಪಂದವಾಗಿದ್ದ ಕಾರಣ ಇಂಗ್ಲೆಂಡ್ ಹೋರಾಟ ನಡೆಸಿ ಅಂತಿಮ ಹಂತಕ್ಕೆ ಬಂದು ತಲುಪಿತ್ತು.
ಆದರೆ ಇಂಗ್ಲೆಂಡ್ ಗೆಲುವಿನ ಅಂಚಿನಲ್ಲಿದ್ದಾಗ, ತಮ್ಮ ದೇಶಕ್ಕೆ ಹಿಂತಿರುಗಲು ಹಡಗು ಹಿಡಿಯಬೇಕಿತ್ತು. ಆ ಹಡಗು ಕೂಡ ಅದೇ ದಿನ ಆಗಮಿಸಿತ್ತು. ಈ ಸುದ್ದಿ ತಿಳಿದ ಆಂಗ್ಲರು ಹಡಗು ಹಿಡಿಯಬೇಕೆಂಬ ತರಾತುರಿಯಲ್ಲಿ ಪಂದ್ಯವನ್ನು ಅರ್ಧದಲ್ಲೇ ಕೈಬಿಟ್ಟು ಹೋಗಿದ್ದರು. ಅಂತಿಮವಾಗಿ, ಈ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತು. ಇಂಥದ್ದೊಂದು ಐತಿಹಾಸಿಕ ಪಂದ್ಯಕ್ಕೆ ಡರ್ಬನ್ ಮೈದಾನ ಸಾಕ್ಷಿಯಾಗಿತ್ತು.
ಇದನ್ನೂ ಓದಿ: ನಮಗೆ ಟಿ20ಯಲ್ಲಿ 180 ಸ್ಕೋರ್ ಮಾಡುವುದು ಹೇಗೆಂದು ತಿಳಿದಿಲ್ಲ: ಬಾಂಗ್ಲಾ ನಾಯಕ