ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ವೇಟ್‌ಲಿಫ್ಟರ್ ಅಚಿಂತಾ ಶೆಯುಲಿ ಅವರು ಎನ್‌ಐಎಸ್ ಪಟಿಯಾಲದಲ್ಲಿ ರಾತ್ರಿ ವೇಳೆ ಮಹಿಳಾ ಹಾಸ್ಟೆಲ್ ಪ್ರವೇಶಿಸುವಾಗ ಸಿಕ್ಕಿಬಿದ್ದಿದ್ದು, ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ ಪೂರ್ವಸಿದ್ಧತಾ ಶಿಬಿರದಿಂದ ಅಮಾನತು ಮಾಡಲಾಗಿದೆ. ಗುರುವಾರ ರಾತ್ರಿ ಈ ಶಿಸ್ತು ಉಲ್ಲಂಘನೆ ಪ್ರಕರಣ ನಡೆದಿದೆ. ಪುರುಷರ 73 ಕೆ.ಜಿ ತೂಕದ ವಿಭಾಗದಲ್ಲಿ ಸ್ಪರ್ಧಿಸುವ 22ರ ಹರೆಯದ ಈ ಯುವಕ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ.
"ನಿಸ್ಸಂಶಯವಾಗಿ ಇಂತಹ ಅಶಿಸ್ತನ್ನು ಸಹಿಸಲಾಗದು. ತಕ್ಷಣವೇ ಶಿಬಿರ ತೊರೆಯುವಂತೆ ಅವರಿಗೆ ಸೂಚಿಸಲಾಗಿದೆ" ಎಂದು ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ (ಐಡಬ್ಲ್ಯುಎಲ್‌ಎಫ್) ಅಧಿಕಾರಿಯೊಬ್ಬರು ತಿಳಿಸಿದರು.
ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಎನ್‌ಐಎಸ್ ಪಟಿಯಾಲಾ ಕಾರ್ಯನಿರ್ವಾಹಕ ನಿರ್ದೇಶಕ ವಿನೀತ್ ಕುಮಾರ್ ಅವರಿಗೆ ಘಟನೆಯ ಕುರಿತು ತಕ್ಷಣವೇ ಮಾಹಿತಿ ನೀಡಲಾಗಿದೆ. ವಿಡಿಯೋ ಸಾಕ್ಷ್ಯಾಧಾರಗಳೂ ಇರುವುದರಿಂದ, ಎಸ್‌ಎಐ ತನಿಖಾ ಸಮಿತಿ ರಚಿಸಿಲ್ಲ. ವಿಡಿಯೋವನ್ನು ಎನ್‌ಐಎಸ್ ಪಟಿಯಾಲ ಇ.ಡಿ.ವಿನೀತ್ ಕುಮಾರ್ ಮತ್ತು ನವದೆಹಲಿಯಲ್ಲಿರುವ ಎಸ್‌ಎಐ ಪ್ರಧಾನ ಕಚೇರಿಗೆ ಕಳುಹಿಸಲಾಗಿದೆ. ಅಚಿಂತ ಅವರನ್ನು ಶಿಬಿರದಿಂದ ಅಮಾನತುಗೊಳಿಸಲು ಐಡಬ್ಲ್ಯುಎಲ್‌ಎಫ್‌ಗೆ ತಿಳಿಸಲಾಗಿದೆ" ಎಂದು ಎಸ್‌ಎಐ ಮೂಲಗಳು ಮಾಹಿತಿ ನೀಡಿವೆ.
2022ರ ಬರ್ಮಿಂಗ್ಹ್ಯಾಮ್ ಸಿಡಬ್ಲ್ಯೂಜಿಯಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದ ಅಚಿಂತ ಶುಕ್ರವಾರ ಶಿಬಿರ ತೊರೆದಿದ್ದಾರೆ. ಪಟಿಯಾಲದಲ್ಲಿರುವ ಸೌಲಭ್ಯವು ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಪ್ರತ್ಯೇಕ ಹಾಸ್ಟೆಲ್‌ಗಳನ್ನು ಹೊಂದಿದೆ. ಪ್ರಸ್ತುತ, ಮಹಿಳಾ ಬಾಕ್ಸರ್‌ಗಳು, ಕ್ರೀಡಾಪಟುಗಳು ಮತ್ತು ಕುಸ್ತಿಪಟುಗಳು ಎನ್ಐಎಸ್ನಲ್ಲಿ ನೆಲೆಸಿದ್ದಾರೆ. ಶಿಸ್ತು ಉಲ್ಲಂಘನೆಗಾಗಿ ವೇಟ್‌ಲಿಫ್ಟರ್ ವಿರುದ್ಧ IWLF ಕಠಿಣ ಕ್ರಮ ಕೈಗೊಂಡಿರುವುದು ಇದೇ ಮೊದಲಲ್ಲ. ಸಿಡಬ್ಲ್ಯೂಜಿ ಮತ್ತು ಯೂತ್ ಒಲಿಂಪಿಕ್ಸ್ ಚಾಂಪಿಯನ್ ಜೆರೆಮಿ ಲಾಲ್ರಿನ್ನುಂಗಾ ಅವರನ್ನು ಈ ಮೊದಲು ಅಶಿಸ್ತು ಆಧಾರದ ಮೇಲೆ ರಾಷ್ಟ್ರೀಯ ಶಿಬಿರದಿಂದ ವಜಾಗೊಳಿಸಲಾಗಿತ್ತು.
ಒಲಿಂಪಿಕ್ ರೇಸ್‌ನಿಂದ ಅಚಿಂತ ಔಟ್: ಶಿಬಿರದಿಂದ ಹೊರಬಿದ್ದ ನಂತರ ಅಚಿಂತ ಶೆಯುಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಸಾಧ್ಯತೆ ಕೊನೆಗೊಂಡಿದೆ. ಅವರು ಪ್ಯಾರಿಸ್ ಕ್ರೀಡಾಕೂಟದ ಅರ್ಹತೆ ಗಳಿಸಬೇಕಿತ್ತು. ಇದರ ಜೊತೆಗೆ ಥಾಯ್ಲೆಂಡ್‌ನ ಫುಕೆಟ್‌ನಲ್ಲಿ ಈ ತಿಂಗಳ IWF ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವುದು ಕೂಡಾ ಸಾಧ್ಯವಿಲ್ಲ. ಶೆಯುಲಿ ಪ್ರಸ್ತುತ ಒಲಿಂಪಿಕ್ ಅರ್ಹತಾ ಶ್ರೇಯಾಂಕದಲ್ಲಿ 27ನೇ ಸ್ಥಾನದಲ್ಲಿದ್ದಾರೆ ಮತ್ತು ಕಾಂಟಿನೆಂಟಲ್ ಕೋಟಾದ ಮೂಲಕ ಪಡೆಯುವ ಅವಕಾಶ ಹೊಂದಿದ್ದರು.
ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು (49 ಕೆ.ಜಿ) ಮತ್ತು ಸಿಡಬ್ಲ್ಯೂಜಿ ಬೆಳ್ಳಿ ಪದಕ ವಿಜೇತೆ ಬಿಂದ್ಯಾರಾಣಿ ದೇವಿ ಮಾತ್ರ ಪ್ಯಾರಿಸ್ ಕ್ರೀಡಾಕೂಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಐಡಬ್ಲ್ಯುಎಫ್ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಇಬ್ಬರೂ ಈ ತಿಂಗಳಾಂತ್ಯದಲ್ಲಿ ಥಾಯ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ.