ಬೆಂಗಳೂರು: ಮಹಾರಾಜ ಟ್ರೋಫಿ ಮೂರನೇ ಸೀಸನ್‌ಗಾಗಿ ಹರಾಜಿಗೂ ಮುನ್ನ 6 ತಂಡಗಳು ರಿಟೈನ್ ಮಾಡಿಕೊಂಡಿರುವ ಆಟಗಾರರ ಪಟ್ಟಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಬಿಡುಗಡೆಗೊಳಿಸಿದೆ. ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಕರುಣ್ ನಾಯರ್, ಅಭಿನವ್ ಮನೋಹರ್, ವೈಶಾಕ್ ವಿಜಯ್ ಕುಮಾರ್ ರಿಟೈನ್ಡ್ ಪಟ್ಟಿಯಲ್ಲಿರುವ ಪ್ರಮುಖ ಆಟಗಾರರು. ಜುಲೈ 25ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.
ಕಳೆದ ಸೀಸನ್‌ನ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ನಿರೀಕ್ಷೆಯಂತೆ ನಾಯಕ ಮನೀಶ್ ಪಾಂಡೆ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಉಳಿದಂತೆ, ಕಳೆದ ಬಾರಿ ಗರಿಷ್ಠ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಶ್ರೀಜಿತ್ ಕೆ.ಎಲ್. ಹಾಗೂ ಗರಿಷ್ಠ ವಿಕೆಟ್ ಪಡೆದಿದ್ದ ಮನ್ವಂತ್ ಕುಮಾರ್ ಸಹ ಹುಬ್ಬಳ್ಳಿ ತಂಡದಲ್ಲಿಯೇ ಇದ್ದಾರೆ. ರನ್ನರ್ ಅಪ್ ಮೈಸೂರು ವಾರಿಯರ್ಸ್ ಸಹ ಕರುಣ್ ನಾಯರ್, ಸಿ.ಎ. ಕಾರ್ತಿಕ್, ಎಸ್.ಯು. ಕಾರ್ತಿಕ್ ಹಾಗೂ ಮನೋಜ್ ಭಾಂಡಗೆ ಅವರನ್ನು ಉಳಿಸಿಕೊಂಡಿದೆ.
ರಿಟೈನ್ ಆದ ಆಟಗಾರರ ವಿವರ:
ಹುಬ್ಬಳ್ಳಿ ಟೈಗರ್ಸ್: ಮನೀಶ್ ಪಾಂಡೆ, ವಿದ್ವತ್ ಕಾವೇರಪ್ಪ, ಶ್ರೀಜಿತ್ ಕೆ.ಎಲ್., ಮನ್ವಂತ್ ಕುಮಾರ್.
ಮೈಸೂರು ವಾರಿಯರ್ಸ್: ಕರುಣ್ ನಾಯರ್, ಸಿ.ಎ. ಕಾರ್ತಿಕ್, ಎಸ್.ಯು. ಕಾರ್ತಿಕ್, ಮನೋಜ್ ಭಾಂಡಗೆ.
ಗುಲ್ಬರ್ಗಾ ಮಿಸ್ಟಿಕ್ಸ್: ದೇವದತ್ ಪಡಿಕ್ಕಲ್, ವೈಶಾಕ್ ವಿಜಯ್ ಕುಮಾರ್, ಸ್ಮರಣ್ ರವಿ, ಅನೀಶ್ ಕೆ.ವಿ.
ಶಿವಮೊಗ್ಗ ಲಯನ್ಸ್: ಅಭಿನವ್ ಮನೋಹರ್, ನಿಹಾಲ್ ಉಲ್ಲಾಳ್, ಶಿವರಾಜ್, ವಿ. ಕೌಶಿಕ್.
ಮಂಗಳೂರು ಡ್ರ್ಯಾಗನ್ಸ್: ನಿಕಿನ್ ಜೋಸ್, ರೋಹನ್ ಪಾಟೀಲ್, ಸಿದ್ದಾರ್ಥ್ ಕೆ.ವಿ., ಪರಸ್ ಗುರ್ಬಾಕ್ಸ್ ಆರ್ಯ.
ಬೆಂಗಳೂರು ಬ್ಲಾಸ್ಟರ್ಸ್: ಮಯಾಂಕ್ ಅಗರ್ವಾಲ್, ಸೂರಜ್ ಅಹುಜಾ, ಶುಭಾಂಗ್ ಹೆಗ್ಡೆ, ಮೊಹ್ಸಿನ್ ಖಾನ್.
"ಮಹಾರಾಜ ಟ್ರೋಫಿಯ 3ನೇ ಸೀಸನ್‌ಗಾಗಿ ನಾವು ಕುತೂಹಲದಿಂದ ಎದುರು ನೋಡುತ್ತಿದ್ದೇವೆ. ಫ್ರಾಂಚೈಸಿ ಮಾದರಿಯ ಟೂರ್ನಿಯಲ್ಲಿ ಆಟಗಾರರ ರಿಟೈನ್ ಪ್ರಮುಖ ಪ್ರಕ್ರಿಯೆಯಾಗಿದ್ದು, ಪ್ರತಿ ತಂಡವೂ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳುವ ಮೂಲಕ ತನ್ನ ಬಲಿಷ್ಠ ಪರಂಪರೆ ಮುಂದುವರೆಸಲು ಅನುಕೂಲವಾಗಲಿದೆ'' ಎಂದು ಮಹಾರಾಜ ಟ್ರೋಫಿಯ ಆಯುಕ್ತ ಬಿ.ಕೆ.ಸಂಪತ್ ಕುಮಾರ್ ತಿಳಿಸಿದರು.
ಆಗಸ್ಟ್ 15ರಿಂದ ಸೆಪ್ಟೆಂಬರ್ 1ರವರೆಗೂ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್ ಸ್ಪೋರ್ಟ್ಸ್ ಕನ್ನಡ ಹಾಗೂ ಫ್ಯಾನ್ ಕೋಡ್ ಮೂಲಕ ನೇರಪ್ರಸಾರ ವೀಕ್ಷಿಸಬಹುದಾಗಿದೆ.