ಹೈದರಾಬಾದ್: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಯುವ ಬೌಲರ್ ಹರ್ಷಿತ್ ರಾಣಾ ಈ ಋತುವಿನ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿಯೂ ಗುರುತಿಸಿಕೊಂಡಿರುವ ವೇಗಿ ಅತ್ಯುತ್ಸಾಹದಲ್ಲಿ ಎದುರಾಳಿ ಆಟಗಾರರನ್ನು ಕೆಣಕಿ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಅಭಿಷೇಕ್ ಪೊರೆಲ್ ವಿಕೆಟ್ ಪಡೆದ ಬಳಿಕ ಪೆವಿಲಿಯನ್ಗೆ ನಡೆ ಎಂಬಂತೆ ಸನ್ನೆ ಮಾಡಿ ಕಿಚಾಯಿಸಿದರು. ಬಳಿಕ ಫ್ಲೈಯಿಂಗ್ ಕಿಸ್ ಕೊಡಲು ಮುಂದಾಗಿದ್ದ. ಇದು ಐಪಿಎಲ್ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ವೇಗಿಗೆ ಪಂದ್ಯದ ಶುಲ್ಕ ಶೇಕಡಾ 100 ರಷ್ಟು ದಂಡ ವಿಧಿಸಲಾಗಿದೆ. ಜೊತೆಗೆ ಒಂದು ಪಂದ್ಯದ ನಿಷೇಧ ಹೇರಲಾಗಿದೆ.
ಮೈದಾನದಲ್ಲಿ ರಾಣಾ ರೋಷಾವೇಶ: ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 7ನೇ ಓವರ್ ಎಸೆದ ರಾಣಾ, 18 ರನ್ ಗಳಿಸಿ ಆಡುತ್ತಿದ್ದ ಅಭಿಷೇಕ್ ಪೊವೆಲ್ರನ್ನು ಕ್ಲೀನ್ಬೌಲ್ಡ್ ಮಾಡಿದರು. ಖುಷಿಯಲ್ಲಿ ಪೊರೆಲ್ ಬೆನ್ನ ಹಿಂದಿನಿಂದ ಪೆವಿಲಿಯನ್ಗೆ ಹೋಗು ಎಂಬಂತೆ ಸನ್ನೆ ಮಾಡಿದರು. ಬಳಿಕ ಫ್ಲೈಯಿಂಗ್ ಕಿಸ್ ಮಾಡುವಂತೆ ಕಂಡುಬಂದರು. ಸಲಾಮ್ ಮಾಡುವಂತೆಯೂ ವ್ಯಂಗ್ಯವಾಗಿ ನಡೆದುಕೊಂಡರು.
ಇದು ಐಪಿಎಲ್‌ನ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಅಡಿಯಲ್ಲಿ 1ನೇ ಹಂತದ ಅಪರಾಧವಾಗಿದೆ. ಪಂದ್ಯ ಮುಗಿದ ಬಳಿಕ ಮ್ಯಾಚ್ ರೆಫ್ರಿ ವಿಚಾರಣೆಗೆ ಒಳಪಡಿಸಿದರು. ರಾಣಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ನಿಯಮ ಉಲ್ಲಂಘನೆಗಾಗಿ, ನೂರರಷ್ಟು ದಂಡ, ಒಂದು ಪಂದ್ಯದ ನಿಷೇಧದ ಶಿಕ್ಷೆಗೆ ಗುರಿಡಪಡಿಸಲಾಯಿತು.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಐಪಿಎಲ್, ನೀತಿ ಸಂಹಿತೆ ಆರ್ಟಿಕಲ್ 2.5 ಪ್ರಕಾರ, ಪಂದ್ಯದಲ್ಲಿ ಇನ್ನೊಬ್ಬ ಆಟಗಾರನ ವಿರುದ್ಧ ಆಕ್ರಮಣಕಾರಿ ಪ್ರತಿಕ್ರಿಯೆ, ಕೆರಳಿಸುವ, ಅವಹೇಳನ ಭಾಷೆ, ಕ್ರಿಯೆಗಳು ಅಥವಾ ಸನ್ನೆಗಳನ್ನು ಬಳಸುವಂತಿಲ್ಲ. ಇದು ಮೊದಲ ಹಂತದ ಅಪರಾಧವಾಗಿದೆ ಎಂದಿದೆ. ಈ ಎಲ್ಲಾ ನಿಯಮಗಳನ್ನು ಮೀರಿದ ಹರ್ಷಿತ್ ರಾಣಾಗೆ ಶಿಕ್ಷೆ ವಿಧಿಸಲಾಗಿದೆ ಎಂದು ತಿಳಿಸಿದೆ.
ಮುಂಬೈ ಪಂದ್ಯದಿಂದ ಔಟ್: ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಿರುವ ಕಾರಣ ರಾಣಾ ಮಾರ್ಚ್ 23 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ. ಸ್ಪಿನ್ನರ್ಗಳಾದ ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಅವರ ಜೊತೆಗೆ ರಾಣಾ ಕೆಕೆಆರ್ ತಂಡದ ಜಂಟಿ ಅತಿ ಹೆಚ್ಚು ವಿಕೆಟ್ ಟೇಕರ್ ಆಗಿದ್ದಾರೆ. ಈ ಮೂವರು ತಲಾ 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಎರಡನೇ ಬಾರಿಗೆ ದಂಡ: ಈ ಹಿಂದೆಯೂ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟರ್ ಮಯಾಂಕ್ ಅಗರ್ವಾಲ್ಗೆ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ಪಂದ್ಯದ ಶುಲ್ಕ ಶೇಕಡಾ 60 ರಷ್ಟು ದಂಡನೆಗೆ ರಾಣಾ ಗುರಿಯಾಗಿದ್ದರು. ಈಗ ಎರಡನೇ ತಪ್ಪಿನಿಂದಾಗಿ ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ: ಟಿ20 ವಿಶ್ವಕಪ್ ಮಾದರಿ ಹೇಗಿರಲಿದೆ? ಟೀಂ ಇಂಡಿಯಾದ ಅಭಿಯಾನ ಯಾವಾಗ ಶುರು? - T20 World Cup