ಹೈದರಾಬಾದ್: ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ (BCCI) ಜಯ್ ಶಾ ಮೂರನೇ ಬಾರಿಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC)ನ ಅಧ್ಯಕ್ಷರಾಗಿ ಮರು ನೇಮಕಗೊಂಡಿದ್ದಾರೆ. ಬುಧವಾರ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ ಒಂದು ವರ್ಷದ ವರೆಗೆ ಎಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಅಧ್ಯಕ್ಷ ಶಮ್ಮಿ ಸಿಲ್ವಾ ಅವರು ಎರಡನೇ ಬಾರಿಗೆ ಜಯ್ ಶಾ ಅವರ ಅಧಿಕಾರಾವಧಿಯ ವಿಸ್ತರಣೆಯನ್ನು ಪ್ರಸ್ತಾಪಿಸಿದರು. ನಾಮ ನಿರ್ದೇಶನವನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಎಲ್ಲಾ ಸದಸ್ಯರು ಸರ್ವಾನುಮತದಿಂದ ಬೆಂಬಲಿಸಿದರು. ಜನವರಿ 2021ರಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದ ನಜ್ಮುಲ್ ಹಸನ್ ಅವರ ನಂತರ ಶಾ ಎಸಿಸಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಎಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ಅತ್ಯಂತ ಕಿರಿಯ ಆಡಳಿತಗಾರ ಎಂಬ ಹೆಗ್ಗಳಿಕೆಗೂ ಜಯ್ ಶಾ ಪಾತ್ರರಾಗಿದ್ದಾರೆ. ಶಾ ಅವರ ಅಧಿಕಾರವಧಿಯಲ್ಲಿ ACC ಏಷ್ಯಾದ ಪ್ರದೇಶದಾದ್ಯಂತ ಕ್ರಿಕೆಟ್ ಅನ್ನು ಉತ್ತೇಜಿಸುವಲ್ಲಿ ಮತ್ತು ಅಭಿವೃದ್ಧಿಪಡಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಅಲ್ಲದೇ 2022ರಲ್ಲಿ ಟಿ20 ಮಾದರಿಯಲ್ಲಿ ಮತ್ತು 2023 ರಲ್ಲಿ ODI ಮಾದರಿಯಲ್ಲಿ ಏಷ್ಯಾಕಪ್ ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಧನ್ಯವಾದ ತಿಳಿಸಿದ ಜಯ್ ಶಾ: ಬಳಿಕ ಈ ಕುರಿತು ಪ್ರತಿಕ್ರಿಯಿಸಿದ ಜಯ್ ಶಾ, ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಎಸಿಸಿ ಮಂಡಳಿಗೆ ನಾನು ಆಭಾರಿಯಾಗಿದ್ದೇನೆ. ಕ್ರಿಕೆಟ್ ಆರಂಭಿಕ ಹಂತದಲ್ಲಿರುವ ಪ್ರದೇಶಗಳಿಗೆ ವಿಶೇಷ ಗಮನವನ್ನು ನೀಡುವಾಗ ನಾವು ಆಟದ ಸರ್ವತೋಮುಖ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಗಮನಹರಿಸಬೇಕು. ಏಷ್ಯಾದಾದ್ಯಂತ ಕ್ರಿಕೆಟ್ ಅನ್ನು ಉತ್ತೇಜಿಸಲು ಎಸಿಸಿ ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಶಾ ಬಗ್ಗೆ ಶಮ್ಮಿ ಸಿಲ್ವಾ ಬಣ್ಣನೆ: ಶ್ರೀಲಂಕಾ ಕ್ರಿಕೆಟ್ ಅಧ್ಯಕ್ಷ ಶಮ್ಮಿ, ಜಯ್ ಶಾ ಅವರ ಮಾರ್ಗದರ್ಶನದಲ್ಲಿ ACC ಬಾಂಗ್ಲಾದೇಶ, ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾದಂತಹ ದೇಶಗಳಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸುವಲ್ಲಿ ಮತ್ತು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದಿದ್ದಾರೆ. ಓಮನ್ ಕ್ರಿಕೆಟ್ ಅಧ್ಯಕ್ಷ ಮತ್ತು ಎಸಿಸಿ ಉಪಾಧ್ಯಕ್ಷ ಪಂಕಜ್ ಖಿಮ್ಜಿ ಕೂಡ ಜಯ್ ಶಾ ಅವರ ಅಧಿಕಾರಾವಧಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಎಸಿಸಿ ಏಷ್ಯಾಖಂಡದಾದ್ಯಂತ ಆಟದ ವಿವಿಧ ಅಂಶಗಳನ್ನು ಸಂಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪುರುಷರು ಮತ್ತು ಮಹಿಳೆಯರಿಗಾಗಿ ಏಷ್ಯಾಕಪ್ ನಂತಹ ಪ್ರತಿಷ್ಠಿತ ಪಂದ್ಯಾವಳಿಗಳನ್ನು ಮೇಲ್ವಿಚಾರಣೆ ಮಾಡುತ್ತದೆ.
ಇದನ್ನೂ ಓದಿ: ಮಯಾಂಕ್ ಅಗರ್ವಾಲ್ ಅಪಾಯದಿಂದ ಪಾರು, ಶೀಘ್ರವೇ ಬೆಂಗಳೂರಿಗೆ ರವಾನೆ: ಕೆಎಸ್ಸಿಎ ಮಾಹಿತಿ