ನವದೆಹಲಿ: ಅಕ್ಟೋಬರ್ 1 ರಿಂದ 5 ರವರೆಗೆ ಮುಂಬೈನಲ್ಲಿ ನಡೆಯಬೇಕಿದ್ದ 2024 - 25ನೇ ಸಾಲಿನ ಇರಾನಿ ಕಪ್ ಕ್ರಿಕೆಟ್ ಪಂದ್ಯವನ್ನು ಲಖನೌಗೆ ಸ್ಥಳಾಂತರಿಸಲಾಗಿದೆ. ಹಾಲಿ ರಣಜಿ ಟ್ರೋಫಿ ವಿಜೇತ ಮುಂಬೈ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿ ಆಯ್ಕೆ ಮಾಡಿರುವ ರೆಸ್ಟ್ ಆಫ್ ಇಂಡಿಯಾ ತಂಡಗಳ ನಡುವೆ ಪಂದ್ಯ ನಡೆಯಲಿದೆ.
ಲಖನೌದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಇರಾನಿ ಕಪ್ ಪಂದ್ಯಕ್ಕೆ ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಯುಪಿಸಿಎ) ಆತಿಥ್ಯ ವಹಿಸಲಿದೆ ಎಂದು ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಯುಪಿಸಿಎ) ನ ಹಲವಾರು ಅಧಿಕಾರಿಗಳು ಬುಧವಾರ ಐಎಎನ್ಎಸ್ಗೆ ಖಚಿತಪಡಿಸಿದ್ದಾರೆ. ಪ್ರಸ್ತುತ, ಈ ಸ್ಟೇಡಿಯಂನಲ್ಲಿ ಆರು ತಂಡಗಳ ಯುಪಿಟಿ 20 ಲೀಗ್ನ ಎರಡನೇ ಋತುವಿನ ಪಂದ್ಯಗಳು ನಡೆಯುತ್ತಿವೆ.
ಮುಂಬೈನಲ್ಲಿ ಮಳೆ ಪಂದ್ಯ ಲಖನೌಗೆ ಶಿಫ್ಟ್: ಪ್ರಸ್ತುತ ಮುಂಬೈನಲ್ಲಿ ಮುಂಗಾರು ಮಳೆ ಮುಂದುವರೆದಿದ್ದು, ಮೈದಾನದಲ್ಲಿನ ಪಿಚ್ ಮತ್ತು ಔಟ್ಫೀಲ್ಡ್ಗಳನ್ನು ಸಿದ್ಧಗೊಳಿಸಲು ಸಮಯ ಸಾಕಾಗುತ್ತಿಲ್ಲ. ಒದೇ ಕಾರಣಕ್ಕೆ ಇರಾನಿ ಕಪ್ ಪಂದ್ಯವನ್ನು ಲಖನೌಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ಅಕ್ಯೂವೆದರ್ ಪ್ರಕಾರ, ಅಕ್ಟೋಬರ್ ಆರಂಭದವರೆಗೆ ಮುಂಬೈನಲ್ಲಿ ಮಳೆ ಮುಂದುವರಿಯುವ ಮುನ್ಸೂಚನೆ ಇದೆ. ಆದರೆ, ಅದೇ ಅವಧಿಯಲ್ಲಿ ಲಖನೌದಲ್ಲಿ ಬಿಸಿಲಿನ ವಾತಾವರಣ ಇರಲಿದೆ. ಏತನ್ಮಧ್ಯೆ ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಎರಡನೇ ಪಂದ್ಯದ ಅಂತಿಮ ದಿನದಾಟದಲ್ಲಿ ಆಡಲಿರುವ ಭಾರತ ಟೆಸ್ಟ್ ತಂಡದ ಆಟಗಾರರು ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಆಡುವುದಿಲ್ಲ.
ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2023-24ರ ರಣಜಿ ಟ್ರೋಫಿ ಫೈನಲ್ನಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ತಂಡವು ವಿದರ್ಭವನ್ನು 169 ರನ್ಗಳಿಂದ ಸೋಲಿಸಿ 42ನೇ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಕಳೆದ ವರ್ಷ ರಾಜ್ ಕೋಟ್ನಲ್ಲಿ ಸೌರಾಷ್ಟ್ರವನ್ನು 175 ರನ್ಗಳಿಂದ ಸೋಲಿಸಿದ ರೆಸ್ಟ್ ಆಫ್ ಇಂಡಿಯಾ ಇರಾನಿ ಕಪ್ ಗೆದ್ದಿತ್ತು.
ಇರಾನಿ ಕಪ್ ಪಂದ್ಯಾವಳಿಗಳನ್ನು ಪ್ರಥಮ ಬಾರಿಗೆ ಮಾರ್ಚ್ 1960 ರಲ್ಲಿ ಆರಂಭಿಸಲಾಯಿತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಮತ್ತು ಖಜಾಂಚಿಯಾಗಿದ್ದ ಝಲ್ ಆರ್ ಇರಾನಿ ಅವರ ಹೆಸರನ್ನು ಪಂದ್ಯಾವಳಿಗೆ ಇಡಲಾಗಿದೆ. ರೆಸ್ಟ್ ಆಫ್ ಇಂಡಿಯಾ 26 ಬಾರಿ ಟ್ರೋಫಿಯನ್ನು ಗೆದ್ದರೆ, ಮುಂಬೈ 14 ಬಾರಿ ಗೆದ್ದಿದೆ.
ಇದನ್ನೂ ಓದಿ : ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ಗೆ ಭಾರತ ತಂಡ ಪ್ರಕಟ; ಹೊಸ ಮುಖಗಳಿಗೆ ಅವಕಾಶ - BCCI Announced Indian Squad