ಚೆನ್ನೈ (ತಮಿಳುನಾಡು): ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಆರಂಭಿಕ ಹೈವೊಲ್ಟೇಜ್ ಪಂದ್ಯದಲ್ಲಿ ರನ್ ಮಷಿನ್ ಖ್ಯಾತಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 12 ಸಾವಿರ ರನ್‌ಗಳನ್ನು ಪೂರೈಸುವ ಮೂಲಕ ಭಾರತ ಮೊದಲ ಮತ್ತು ವಿಶ್ವದ ಆರನೇ ಬ್ಯಾಟರ್ ಆಗಿ ಕೊಹ್ಲಿ ಹೊರ ಹೊಮ್ಮಿದ್ದಾರೆ.
ಏಳನೇ ಓವರ್ ಮಾಡಲು ಬಂದ ಚೆನ್ನೈ ತಂಡದ ಪ್ರಮುಖ ಆಲ್ ರೌಂಡರ್ ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ 2 ರನ್ ಗಳನ್ನು ಗಳಿಸಿದ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಮಾಜಿ ವೆಸ್ಟ್ ಇಂಡೀಸ್ ಬ್ಯಾಟರ್ ಕ್ರಿಸ್ ಗೇಲ್ ನಂತರ ಈ ಮೈಲಿಗಲ್ಲು ತಲುಪಿದ ವಿಶ್ವದ ಎರಡನೇ ಅತಿ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಕೊಹ್ಲಿ ತಮ್ಮ 377ನೇ ಪಂದ್ಯದಲ್ಲಿ 12 ಸಾವಿರ ರನ್‌ಗಳ ಗಡಿಯನ್ನು ತಲುಪಿದ್ದಾರೆ. ಕ್ರಿಸ್ ಗೇಲ್, ಪಾಕಿಸ್ತಾನದ ಮಾಜಿ ಬ್ಯಾಟರ್ ಶೋಯೆಬ್ ಮಲಿಕ್, ವೆಸ್ಟ್ ಇಂಡೀಸ್ ಮಾಜಿ ಆಲ್‌ರೌಂಡರ್ ಕೀರಾನ್ ಪೊಲಾರ್ಡ್, ಅಲೆಕ್ಸ್ ಹೇಲ್ಸ್ ಮತ್ತು ಸ್ವಾಶ್‌ಬಕ್ಲಿಂಗ್ ಬ್ಯಾಟರ್ ಡೇವಿಡ್ ವಾರ್ನರ್ ಅವರಿಗಿಂತ ಕೊಹ್ಲಿ ಹಿಂದಿದ್ದಾರೆ. ಆದರೆ, ಇವರಿಗಿಂತ ಕೊಹ್ಲಿ ಮಾತ್ರ 40 ಕ್ಕಿಂತ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.
ಈವರೆಗೆ ಟಿ-20 ಕ್ರಿಕೆಟ್‌ನಲ್ಲಿ ಒಟ್ಟು 8 ಶತಕಗಳನ್ನು ಸಿಡಿಸಿರುವ ಕೊಹ್ಲಿ, ಭಾರತದಲ್ಲೇ ಅತಿ ಹೆಚ್ಚು ಶತಕ ಹೊಡೆದಿರುವ ಆಟಗಾರರಾಗಿದ್ದಾರೆ. ಅವರ ವೃತ್ತಿ ಜೀವನದ ಅತ್ಯುತ್ತಮ ನಾಕ್ ಎಂದರೆ ಔಟಾಗದೇ 122 ರನ್ ಗಳಿಸಿರುವುದು. ರನ್ ಮಷಿನ್ ಚುಟುಕು ಕ್ರಿಕೆಟ್‌ನಲ್ಲಿ ತಮ್ಮ ಹೆಸರಿಗೆ ಹಲವು ದಾಖಲೆಗಳನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 4037 ರನ್ಗಳು ಮತ್ತು ಟಿ20 ವಿಶ್ವಕಪ್‌ಗಳಲ್ಲಿ (1,141) ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
ಐಪಿಎಲ್‌ನಲ್ಲೂ ತನ್ನ ಕಮಾಲ್ ತೋರಿರುವ ಕೊಹ್ಲಿ, ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ. 237 ಪಂದ್ಯಗಳಲ್ಲಿ, 37.24 ಸರಾಸರಿಯಲ್ಲಿ 130.02 ಸ್ಟ್ರೈಕ್ ರೇಟ್‌ನೊಂದಿಗೆ 7,263 ರನ್ ಗಳಿಸಿದ್ದಾರೆ. ಕೊಹ್ಲಿಯ ಐಪಿಎಲ್ ಅತ್ಯುತ್ತಮ ಸ್ಕೋರ್ 113 ಆಗಿದೆ. ಟಿ20 ಕ್ರಿಕೆಟ್‌ನಲ್ಲಿ ಹೊಡೆದಿರುವ ಒಟ್ಟು 8 ಶತಕಗಳ ಪೈಕಿ 7 ಶತಕಗಳು ಐಪಿಎಲ್ನಲ್ಲಿ ಬಂದಿರುವುದು ವಿಶೇಷವಾಗಿದೆ. ಇದರೊಂದಿಗೆ 50 ಅರ್ಧಶತಕಗಳನ್ನು ಗಳಿಸಿದ್ದಾರೆ.
ಕಳೆದ ಋತುವಿನ ಐಪಿಎಲ್ನಲ್ಲಿ 53.25 ಸರಾಸರಿಯಲ್ಲಿ ಮತ್ತು 139.82 ಸ್ಟ್ರೈಕ್ ರೇಟ್‌ನಲ್ಲಿ 639 ರನ್‌ಗಳನ್ನು ಸೇರಿಸಿರುವ ಮೂಲಕ ಕೊಹ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಅವರ ಅತ್ಯುತ್ತಮ ಸ್ಕೋರ್ ಔಟಾಗದೇ 101 ರನ್ ಆಗಿತ್ತು. ಎರಡು ಶತಕ ಮತ್ತು ಆರು ಅರ್ಧಶತಕಗಳನ್ನು ಕೊಹ್ಲಿ ಗಳಿಸಿದ್ದರು. ಆದರೆ, ಕೊನೆ ಹಂತದಲ್ಲಿ ಆರ್ಸಿಬಿ ತಂಡವನ್ನು ಪ್ಲೇ ಆಫ್‌ಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ : ಐಪಿಎಲ್ 2024: ಪ್ಲೇ ಆಫ್ ತಲುಪುವ 4 ತಂಡಗಳ ಭವಿಷ್ಯ ನುಡಿದ ದಿಗ್ಗಜ ಕ್ರಿಕೆಟಿಗರು - IPL 2024 play offs