ಅಹಮದಾಬಾದ್ (ಗುಜರಾತ್): ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿ ವಿಕೆಟ್ ಕೀಪರ್ - ಬ್ಯಾಟರ್ ಸಂಜು ಸ್ಯಾಮ್ಸನ್ ದಾಖಲೆಯೊಂದನ್ನು ಬರೆದಿದ್ದಾರೆ. ತಂಡಕ್ಕೆ ಹೆಚ್ಚು ಗೆಲುವು ತಂಡ ಕೊಟ್ಟ ನಾಯಕ ಎಂಬ ಪಾತ್ರಕ್ಕೆ ಸ್ಯಾಮ್ಸನ್ ಭಾಜನರಾಗಿದ್ದು, ಶೇನ್ ವಾರ್ನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ರಾಜಸ್ಥಾನ ರಾಯಲ್ಸ್ ನಾಲ್ಕು ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಈ ಜಯಯೊಂದಿಗೆ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದಿದೆ. ಅಲ್ಲದೇ, ನಾಯಕರಾಗಿ ಸಂಜು ಸ್ಯಾಮ್ಸನ್ ತಂಡಕ್ಕೆ 31ನೇ ಗೆಲುವನ್ನು ತಂದುಕೊಟ್ಟಿದ್ದಾರೆ. ಅತಿ ಹೆಚ್ಚು ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ ದಾಖಲೆಯನ್ನೂ ಸ್ಯಾಮ್ಸನ್ ಹೊಂದಿದ್ದಾರೆ.
ಇದನ್ನೂ ಓದಿ: ಐಪಿಎಲ್ನಲ್ಲಿ 8 ಸಾವಿರ ರನ್ ಗಳಿಸಿದ ವಿರಾಟ್ ಕೊಹ್ಲಿ, ಮೊದಲ ಬ್ಯಾಟರ್ ಹಿರಿಮೆ
ಈ ಹಿಂದೆ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದ ಶೇನ್ ವಾರ್ನ್ ಸಹ ತಂಡಕ್ಕೆ 31 ಗೆಲುವುಗಳನ್ನು ತಂದುಕೊಟ್ಟಿದ್ದರು. ಈಗ ಇವರ ದಾಖಲೆಯನ್ನು ಸ್ಯಾಮ್ಸನ್ ಸರಿಗಟ್ಟಿದ್ದಾರೆ. ವಾರ್ನ್ ಐಪಿಎಲ್ನ ಮೊದಲ ಆವೃತ್ತಿಯಲ್ಲೇ ರಾಜಸ್ಥಾನಕ್ಕೆ ಟ್ರೋಫಿಯನ್ನೂ ತಂದು ಕೊಟ್ಟಿದ್ದರು. ರಾಹುಲ್ ದ್ರಾವಿಡ್ ತಂಡದ ನಾಯಕರಾಗಿ 18 ಗೆಲುವುಗಳು ಹಾಗೂ ಸ್ಟೀವನ್ ಸ್ಮಿತ್ 15 ಗೆಲುವುಗಳೊಂದಿಗೆ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.
ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಫೈನಲ್ಗೆ ಪ್ರವೇಶಿಸಿದೆ. ಆರ್‌ಸಿಬಿ ವಿರುದ್ಧ ಎಲಿಮಿನೇಟರ್ ಪಂದ್ಯ ಗೆದ್ದಿರುವ ರಾಜಸ್ಥಾನ ರಾಯಲ್ಸ್ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಹೈದರಾಬಾದ್ ಸನ್ರೈಸರ್ಸ್ ತಂಡವನ್ನು ಎದುರಿಸಲಿದೆ. ಮೇ 24ರಂದು ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಹೈದರಾಬಾದ್ ವಿರುದ್ಧ ರಾಜಸ್ಥಾನ ಸೆಣಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್ಗೆ ಲಗ್ಗೆ ಇಡಲಿದ್ದು, ಜೊತೆಗೆ ಮೇ 26ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ತಂಡದೊಂದಿಗೆ ಪ್ರಶಸ್ತಿಗಾಗಿ ಹೋರಾಡಲಿದೆ.
ಇದನ್ನೂ ಓದಿ: ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆಯ ಆಫರ್ ನಿರಾಕರಿಸಿದ ರಿಕಿ ಪಾಂಟಿಂಗ್: ಕಾರಣ ಇದು!